ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಸರ್ಕಾರಕ್ಕೆ ಮನವಿ

KannadaprabhaNewsNetwork |  
Published : Nov 11, 2025, 02:30 AM IST
ವಿವಿಧ ರೈತ ಸಂಘಟನೆಗಳ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರೈತರ ಆಶಾಕಿರಣವಾಗಿರುವ ಏಕೈಕ ಬೆಳೆ ಗೋವಿನಜೋಳದ ಬೆಲೆ ಪಾತಾಳ ಕಂಡಿದೆ. ರೈತರು ಗೋವಿನಜೋಳ ಕಟಾವು ಮಾಡಿಸಿ ಮಾರಾಟ ಮಾಡಲು ಮುಂದಾದರೆ ದಲ್ಲಾಳಿಗಳು ರೈತರ ಬೆಳೆಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ.

ಲಕ್ಷ್ಮೇಶ್ವರ: ಗೋವಿನಜೋಳದ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಶೀಘ್ರದಲ್ಲಿ ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ತಹಸೀಲ್ದಾರ್ ರಾಘವೇಂದ್ರ ಕೆ. ಅವರಿಗೆ ಮನವಿ ಸೋಮವಾರ ಸಲ್ಲಿಸಿದರು.

ಲಕ್ಷ್ಮೇಶ್ವರ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ಮತ್ತು ಕೃಷಿಕ ಸಮಾಜ ನವದೆಹಲಿ, ರೈತ ಸಂಘಟನೆಗಳು ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಶೇಂಗಾ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತಿವೃಷ್ಟಿ ರೈತರ ಕನಸುಗಳನ್ನು ನುಚ್ಚುನೂರು ಮಾಡಿದೆ.

ರೈತರ ಆಶಾಕಿರಣವಾಗಿರುವ ಏಕೈಕ ಬೆಳೆ ಗೋವಿನಜೋಳದ ಬೆಲೆ ಪಾತಾಳ ಕಂಡಿದೆ. ರೈತರು ಗೋವಿನಜೋಳ ಕಟಾವು ಮಾಡಿಸಿ ಮಾರಾಟ ಮಾಡಲು ಮುಂದಾದರೆ ದಲ್ಲಾಳಿಗಳು ರೈತರ ಬೆಳೆಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.ಉತ್ತರ ಕರ್ನಾಟಕ ಬಂಜಾರ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಚನ್ನಪ್ಪ ಷಣ್ಮುಖಿ ಹಾಗೂ ರೈತ ಮುಖಂಡ ಮಂಜುನಾಥ ಮಾಗಡಿ, ಈ ಭಾಗದ ಪ್ರಮುಖ ಬೆಳೆ ಮೆಕ್ಕೆಜೋಳ ಕಟಾವು ಆಗಿದ್ದು, ಗೋವಿನ ಜೋಳದ ಬೆಲೆ ಸ್ಥಳೀಯ ದರವು ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹೨೪೦೦ ಘೋಷಣೆ ಮಾಡಬೇಕು. ಮಾರುಕಟ್ಟೆಯಲ್ಲಿ ಅವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಗೋವಿನಜೋಳದ ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ. ಇದರಿಂದ ರೈತರು ಕಂಗೆಟ್ಟಿದ್ದಾರೆ.

ಪ್ರತಿ ಎಕರೆಗೆ ಗೋವಿನಜೋಳ ಬೆಳೆಯನ್ನು ಬೆಳೆಯಲು ರೈತ ₹೨೫ರಿಂದ ₹೩೦ ಸಾವಿರ ಖರ್ಚು ಮಾಡಿದ್ದು, ಅತಿಯಾದ ಮಳೆಗೆ ಬೆಳೆ ಹಾಳಾಗಿ ಅಲ್ಪಸ್ವಲ್ಪ ಬೆಳೆಯನ್ನು ಮಳೆಯ ನಡುವೆ ಕಟಾವು ಮಾಡಿ ಹದವಾಗಿ ಒಣಗಿಸಿ ಮಾರುಕಟ್ಟೆಗೆ ತಂದರೆ ಮೆಕ್ಕೆಜೋಳ ₹೧೮೦೦ಗೆ ಕುಸಿದಿದೆ. ಇಷ್ಟು ದರಕ್ಕೆ ಮಾರಿದರೆ ಮಾಡಿದ ಕರ್ಚು ಸಹ ಬರುವುದಿಲ್ಲ ಎಂದು ರೈತರು ಪರಿತಪಿಸುತ್ತಿದ್ದಾರೆ. ಆದ್ದರಿಂದ ನಾಲ್ಕು ದಿನದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸದೆ ಹೋದಲ್ಲಿ ಹೊಳಲಮ್ಮ ದೇವಿ ದೇವಸ್ಥಾನದಿಂದ ರೈತರು ಜಾಥಾ ನಡೆಸಿ ಲಕ್ಷ್ಮೇಶ್ವರ ಪಟ್ಟಣದಲ್ಲಿನ ಶಿಗ್ಲಿ ಕ್ರಾಸ್ ಹತ್ತಿರ ಪ್ರತಿಭಟನೆ ನಡೆಸಲಾಗುವುದು ಎಂದರು.

ಈ ವೇಳೆ ಸೋಮಣ್ಣ ಡಾಣಗಲ್ಲ, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜಕ್ಕಣ್ಣವರ, ಟಾಕಪ್ಪ ಸಾತಪೂತೆ, ಹೊನ್ನಪ್ಪ ವಡ್ಡರ ಮಾತನಾಡಿದರು. ಕಿಸಾನ್ ಸಂಘಟನೆಯ ಜಿಲ್ಲಾಧ್ಯಕ್ಷ ಯಲ್ಲಪ್ಪ ಕರಮುಡಿ, ಹಿರೇಮಠ, ಮಂಜುನಾಥ ಬಟ್ಟೂರ, ನಾಗರಾಜ ಚಿಂಚಲಿ, ಬಸವರಾಜ ಜಾಲಗಾರ, ಮಹಾದೇವಗೌಡ ನರಸಮ್ಮನವರ, ಇಸ್ಮಾಯಿಲ್ ಅಡೂರು, ನಾಗಪ್ಪ ಓಂಕಾರಿ, ಗುರಪ್ಪ ಮುಳಗುಂದ, ಲಿಂಗಶೆಟ್ಟಿ, ಜಾವೂರ, ಮಲ್ಲೇಶ ಅಂಕಲಿ, ಶಿವನಗೌಡರ ಅಡರಕಟ್ಟಿ, ಶಿವಜೋಗೆಪ್ಪ ಚಂದರಗಿ, ಯಲ್ಲಪ್ಪ ಕರಮುಡಿ, ಮಂಜುನಾಥ ಕಿತ್ಲಿ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಚಂದ್ರು ಮಾಗಡಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ