ಕನ್ನಡಪ್ರಭ ವಾರ್ತೆ ಭಟ್ಕಳ
ಕುಮಟಾದಲ್ಲಿ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ತೆರಳುವ ವೇಳೆ ಭಟ್ಕಳದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿದ ಸಚಿವರಿಗೆ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಸರಕಾರಿ ಆಸ್ಪತ್ರೆಯ ವೈದ್ಯರ ಕೊರತೆ, ತಜ್ಞ ವೈದ್ಯರ ಖಾಲಿ ಹುದ್ದೆಗಳು, ಎಕ್ಸರೇ ಯಂತ್ರಗಳ ಪದೇಪದೇ ದುರಸ್ತಿ, ಅಗತ್ಯ ಔಷಧಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿರುವ ಭಟ್ಕಳ ಸರಕಾರಿ ಆಸ್ಪತ್ರೆ ಬಗ್ಗೆ ವಿಶೇಷ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ನಗರಸಭೆಯಾಗಿ ಮೇಲ್ದರ್ಜೆಗೇರಿರುವ ಭಟ್ಕಳದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಶೇಷ ಚಿಕಿತ್ಸೆಗೆ ಕುಂದಾಪುರ ಅಥವಾ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಸಾರ್ವಜನಿಕರು ಸಚಿವರಲ್ಲಿ ದೂರಿದರು.ಕಳೆದ ಎರಡೂವರೆ ವರ್ಷಗಳಿಂದ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇರುವುದರಿಂದ ಗರ್ಭಿಣಿಯರು ಹಾಗೂ ಮಹಿಳೆಯರು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ರಾತ್ರಿಪಾಳಿ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಅನುಭವಿ ವೈದ್ಯರು ಲಭ್ಯವಿಲ್ಲದೆ, ತರಬೇತಿ ವೈದ್ಯರು ಮಾತ್ರ ರೋಗಿಗಳನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಸ್ಪತ್ರೆಯ ಎಕ್ಸರೇ ಯಂತ್ರಗಳು ಪದೇಪದೇ ದುರಸ್ತಿಗೊಳಗಾಗುತ್ತಿರುವುದು ಹಾಗೂ ಅಗತ್ಯ ಔಷಧಗಳ ಕೊರತೆಯಿಂದ ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ಔಷಧ ಅಂಗಡಿಗಳ ಮೇಲೆ ಅವಲಂಬಿತರಾಗಿದ್ದಾರೆ. ಅಗತ್ಯ ವೈದ್ಯರ ನೇಮಕ, ಸಿಬ್ಬಂದಿ ಭರ್ತಿ, ಎಕ್ಸರೇ ಯಂತ್ರಗಳ ಸಮರ್ಪಕ ನಿರ್ವಹಣೆ ಮತ್ತು ಔಷಧಗಳ ನಿರಂತರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಈ ಸಂದರ್ಭ ಆಟೋ ಚಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.