ಕಾರಟಗಿ: ಪಟ್ಟಣದ 12ನೇ ವಾರ್ಡ್‌ನ ವಸುಂಧರ ನಗರ ಬಡಾವಣೆಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ನಿವಾಸಿಗಳು ಪುರಸಭೆಗೆ ತೆರಳಿ ಅಧ್ಯಕ್ಷರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ವಾರ್ಡ್‌ನ ನಿವಾಸಿ ಹಾಗೂ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕೊಟಗಿ ಮಾತನಾಡಿ, ಪಟ್ಟಣದ ಕಾರಟಗಿ-ಕನಕಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ವಸುಂಧರ ನಗರ ಬಡಾವಣೆಯು 2004ರಲ್ಲಿಯೇ ನಿರ್ಮಾಣವಾಗಿದೆ. ಈಗಾಗಲೇ ನೂರಾರು ಮನೆ ನಿರ್ಮಾಣವಾಗಿ ಜನರು ವಾಸವಾಗಿದ್ದು, ಇನ್ನು ನೂರಾರು ಸಂಖ್ಯೆಯಲ್ಲಿ ಮನೆಗಳು ನಿರ್ಮಾಣ ಹಂತದಲ್ಲಿವೆ. ಬಡಾವಣೆಗೆ ಸರಿಯಾದ ರಸ್ತೆ ಇಲ್ಲದೆ ಕಚ್ಚಾ ರಸ್ತೆಯಲ್ಲೇ ನಿವಾಸಿಗಳು ಓಡಾಡಬೇಕಿದೆ. ಕನಿಷ್ಠ ಬೀದಿ ದೀಪ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಕೆಲಸ ಮುಗಿಸಿ ಬರುವ ನೌಕರರು ಪ್ರಾಣದ ಹಂಗು ತೊರೆದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ನೂತನ ಅಧ್ಯಕ್ಷ ಮಂಜುನಾಥ್ ಮೇಗೂರು, ಜವಾಬ್ದಾರಿ ಹೊತ್ತು ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
ವಾರ್ಡ್‌ನ ಮತ್ತೋರ್ವ ನಿವಾಸಿ ಶರಣಬಸವ ಪಗಡದಿನ್ನಿ ಮಾತನಾಡಿ, ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬಡಾವಣೆಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ,ಟ್ಯಾಂಕ್‌ಗೆ ಇಲ್ಲಿಯವರೆಗೂ ನೀರಿನ ಸಂಪರ್ಕ, ಪೈಪ್ ಅಳವಡಿಸದೇ ನೀರು ಪೂರೈಕೆ ಇನ್ನೂ ಕನಸಾಗಿ ಉಳಿದಿದೆ. ಇಲ್ಲಿನ ಸಮಸ್ಯೆಗಳ ಕುರಿತು ಪುರಸಭೆಗೆ ಹಲವು ಬಾರಿ ಲಿಖಿತ ಹಾಗೂ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಒಟ್ಟಾರೆ ಇಡೀ ಬಡಾವಣೆ ಪುರಸಭೆ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಪುರಸಭೆ ಅಧ್ಯಕ್ಷರ ಸಮ್ಮುಖದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.ವಾರ್ಡ್ ನಿವಾಸಿಗಳಿಂದ ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ಕಚೇರಿ ವ್ಯವಸ್ಥಾಪಕ ಪರಮೇಶ್ವರಪ್ಪ ಅವರು,ನಿಮ್ಮೆಲ್ಲ ಸಮಸ್ಯೆ ಆಲಿಸಿದ್ದು, ಶೀಘ್ರದಲ್ಲಿಯೇ ಪರಿಹರಿಸುವುದಾಗಿ ಭರವಸೆ ನೀಡಿದರು.
ರಸ್ತೆ, ಕುಡಿಯುವ ನೀರು ಒದಗಿಸುವ ಸಂಬಂಧ ಮುಖ್ಯಾಧಿಕಾರಿ ಹಾಗೂ ವಾರ್ಡ್ ಸದಸ್ಯರೊಂದಿಗೆ ಚರ್ಚಿಸಿ ಶೀಘ್ರ ಸೌಲಭ್ಯ ಕಲ್ಪಿಸಲಾಗುವುದು. ಹಂದಿಗಳ ಕಾಟವಿದೆ ಎಂದು ತಿಳಿಸಿದ್ದು, ಸಂಬಂಧಿಸಿದ ಮಾಲೀಕರಿಗೆ ನೋಟಿಸ್ ನೀಡಿ ಆ ಸಮಸ್ಯೆ ನೀಗಿಸುತ್ತೇವೆ. ಇನ್ನು ಸುಸಜ್ಜಿತ ಲೇಔಟ್ ಆಗಿದ್ದರೂ ಇಲ್ಲಿಯವರೆಗೂ ಏಕೆ ವಿದ್ಯುತ್ ಕಂಬಗಳು ಇಲ್ಲ ಎನ್ನುವುದರ ಕುರಿತು ಪರಿಶೀಲಿಸಿ ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯುತ್ ಕಂಬ, ಬೀದಿ ದೀಪ ಅಳವಡಿಸಿ ಆ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತೇನೆ ಎಂದು ಕಾರಟಗಿ ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು ತಿಳಿಸಿದ್ದಾರೆ.