ಬಜೆಟ್‌ನಲ್ಲಿ ವಿವಿಗೆ ಅಗತ್ಯ ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ

KannadaprabhaNewsNetwork | Published : Mar 5, 2025 12:34 AM

ಸಾರಾಂಶ

ರಾಜ್ಯ ಸರ್ಕಾರದ ಈ ನಡೆಯಿಂದಾಗಿ ಬಡ, ಮಧ್ಯಮ ವರ್ಗದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ.

ಹಿರೇಕೆರೂರು: ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ತೀರ್ಮಾನವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಹಾಗೂ ಮುಂಬರುವ ಬಜೆಟ್‌ನಲ್ಲಿ ವಿವಿಗೆ ಅಗತ್ಯ ಅನುದಾನ ಒದಗಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ತಹಸೀಲ್ದಾರ್ ಎಚ್. ಪ್ರಭಾಕರಗೌಡ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಗಿರೀಶ್ ಬಾರ್ಕಿ ಅವರು, ಕಳೆದ ಎರಡು ವರ್ಷಗಳ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಪ್ರಾರಂಭಿಸಿದ ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ 9 ವಿವಿಗಳನ್ನು ಮುಚ್ಚಲು ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯು ತೀರ್ಮಾನಕ್ಕೆ ಮುಂದಾಗಿರುವುದು ಆತಂಕವನ್ನುಂಟು ಮಾಡಿದೆ.

ರಾಜ್ಯ ಸರ್ಕಾರದ ಈ ನಡೆಯಿಂದಾಗಿ ಬಡ, ಮಧ್ಯಮ ವರ್ಗದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ವಿವಿಗೆ ಮೂಲ ಸೌಕರ್ಯಗಳನ್ನು ಒದಗಿಸದಿರುವ ಸ್ಥಿತಿಯಲ್ಲಿಯೂ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಹಾವೇರಿ ವಿವಿಯು ಮುನ್ನಡೆಯುತ್ತಿದೆ.

ಸರ್ಕಾರದಿಂದ ಅನುದಾನವಿರದ ಪರಿಸ್ಥಿತಿಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವಿಶ್ವವಿದ್ಯಾಲಯವನ್ನು ಮುಚ್ಚಲು ರಾಜ್ಯ ಸರಕಾರ ತೀರ್ಮಾನಿಸಿರುವುದು ಯಾವುದೇ ರೀತಿಯಲ್ಲಿ ಒಪ್ಪಲಾಗದು. ಈಗಾಗಲೇ ಈ ವಿವಿಯಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ನೂರಾರು ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ಈ ವಿವಿಗಳಿಗೆ ಸೇರ್ಪಡೆಯಾಗಿರುವ 42 ಪದವಿ ಕಾಲೇಜುಗಳು ಮತ್ತು ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕರವೇ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಎಸ್.ಬಿ., ತಾಲೂಕು ಗೌರವಾಧ್ಯಕ್ಷ ಜೈ ಕುಮಾರ ಉಪ್ಪಾರ, ಈರಮ್ಮ, ಟಿಪ್ಪು ಸುಲ್ತಾನ್ ಮಕಾಂದಾರ್ ಕನ್ನಪ್ಪ ಮಾಳಕ್ಕನವರ, ರಾಜು ಹೊಸಕಟ್ಟಿ, ಹಾಕಿಬ್ ರಾಣೆಬೆನ್ನೂರ, ಕಾಂತೇಶ ಕೋಟಿಹಾಳ, ಹಿರಿಯಪ್ಪ ಬಿಲ್ಲಳ್ಳಿ, ಬಿ.ಎಚ್. ಬಣಕಾರ, ಶಿವಣ್ಣ ಹುಳ್ಳಿ, ಗಣೇಶ ತಾವರಗಿ, ಮಂಜು, ಬಸವರಾಜ ಪೂಜಾರ, ಹಜರತ್‌ಅಲಿ ಕಾಟೇನಹಳ್ಳಿ, ಶಫಿ ಹಿರೇಕೆರೂರ ಇದ್ದರು.ಬಜೆಟ್‌ನಲ್ಲಿ ಜಿಲ್ಲೆಗೆ ಆದ್ಯತೆ ನೀಡಲು ಆಗ್ರಹ

ಹಾವೇರಿ: ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವ ನಿರ್ಧಾರ ಹಿಂಪಡೆದು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಸೇರಿದಂತೆ ಬಜೆಟ್‌ನಲ್ಲಿ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಜಿಲಾನಿ ಮೇದೂರ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ವಿಶ್ವವಿದ್ಯಾಲಯ ಬಂದ್ ಮಾಡುವುದರಿಂದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಪ್ರಸ್ತುತ ಹಾವೇರಿ ವಿಶ್ವವಿದ್ಯಾಲಯದಲ್ಲಿ 6 ಸ್ನಾತಕೋತ್ತರ ಪದವಿಗಳು ನಡೆಯುತ್ತಿದ್ದು, 42 ಪದವಿ ಕಾಲೇಜುಗಳು ವಿಶ್ವವಿದ್ಯಾಲಯೊಂದಿಗೆ ಸಂಯೋಜಿತಗೊಂಡಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ಹಿಂಪಡೆದು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೆರಿಗೆ ಆಸ್ಪತ್ರೆಗಳಲ್ಲಿ ಅನುಭವಿ ಸ್ತ್ರೀರೋಗ ತಜ್ಞ ವೈದ್ಯರು, ದಾದಿಯರನ್ನು ನೇಮಿಸಿ 24x7 ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಎಲ್ಲ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞ ವೈದ್ಯರನ್ನು ನೇಮಿಸಬೇಕು. ಜತೆಗೆ ಯಂತ್ರೋಪಕರಣಗಳು ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಬೇಕು ಎಂದರು.ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಖಾಸೀಂ ರಬ್ಬಾನಿ, ಅಕ್ಬರ್‌ಅಲಿ ಪರಂಡೆ, ಜಬಿವುಲ್ಲಾ ಹಿರೇಕೆರೂರ, ವಾಜಿದ್ ತುಮ್ಮಿನಕಟ್ಟಿ, ಅತಾವುಲ್ಲಾ ಸೇರಿದಂತೆ ಇತರರು ಇದ್ದರು.

Share this article