ನರಗುಂದ: ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಶೇ. 75ರಷ್ಟು ಕಡಲೆ ಬಿತ್ತನೆಯಾಗಿದೆ. 20 ದಿನದೊಳಗಾಗಿ ಫಸಲು ಕಟಾವಿಗೆ ಬರಲಿದೆ. ಸರ್ಕಾರ ಶೀಘ್ರ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ರೈತರ ಖಾತೆಯಿಂದ 30 ಕ್ವಿಂಟಲ್ ಕಡಲೆ ಖರೀದಿ ಮಾಡಬೇಕೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್ .ಎಸ್. ಪಾಟೀಲ ಆಗ್ರಹಿಸಿದರು.
ಮುಂಗಾರು ಬೆಳೆ ಅತಿವೃಷ್ಟಿಯಿಂದಾಗಿ ಹಾನಿಯಾಗಿದ್ದು, ಹಲವು ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ. ನೀರಾವರಿ ಕಾಲುವೆಗೆ ನೀರು ಬಿಟ್ಟು ಎರಡು ತಿಂಗಳಾದರೂ ನೀರು ನಿರ್ವಹಣೆ ಮಾಡಲು ಟೆಂಡರ್ ಮಾಡಿಲ್ಲ. ರೈತರ ಜಮೀನಿಗೆ ನೀರು ಬರದೆ ಬೆಳೆಗಳು ಕುಂಠಿತಗೊಂಡಿವೆ. ನೀರಾವರಿ ಇಲಾಖಾ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ತಾಲೂಕಾಧ್ಯಕ್ಷ ನಾಗೇಶ ಅಪ್ಪೋಜಿ ಮಾತನಾಡಿ, ಹದಲಿ ಗಂಗಾಪುರ ಜಾಕವೆಲ್‌ಗಳು ಇನ್ನೂ ಪ್ರಾರಂಭವಾಗಿಲ್ಲ. ಜಾಕವೆಲ್ ಅವಲಂಬಿತ ಜಮೀನುಗಳಲ್ಲಿನ ಬೆಳೆಗಳು ನೀರು ಇಲ್ಲದೇ ಒಣಗುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪದಿಂದ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಅಂತಹ ರೈತರಿಗೆ ನೀರಾವರಿ ಇಲಾಖೆ ಎಕರೆಗೆ ₹50,000 ಪರಿಹಾರ ಒದಗಿಸಬೇಕು ಎಂದರು. ಉಪತಹಸೀಲ್ದಾರ್ ಪರಶುರಾಮ ಕಲಾಲ ರೈತರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ವಿಠ್ಠಲ ಮುಧೋಳೆ, ಮುತ್ತು ಯಲಿಗಾರ, ಹನುಮಂತ ಹಡಗಲಿ, ಅಡಿವೆಪ್ಪ ಮೆಣಸಿನಕಾಯಿ, ಶ್ರೀಶೈಲ ಮೇಟಿ, ಬಸವರಾಜ ಘಾಟಗೆ, ಯೋಗೇಶ ಗುಡಾರದ, ಎಂ.ಎಸ್. ಹಂಚಿನಾಳ, ಶಿದ್ದನಗೌಡ ವೀರನಗೌಡ್ರ, ಶರಣಬಸಪ್ಪ ಪಾರ್ವತಿ ಸೇರಿದಂತೆ ಮುಂತಾದವರು ಇದ್ದರು.