ಕನ್ನಡಪ್ರಭ ವಾರ್ತೆ ಹಾವೇರಿ
ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಸುವರ್ಣಸೌಧದಲ್ಲಿರುವ ಅವರ ಭಾವಚಿತ್ರ ತೆಗೆಯಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುವ ಮೂಲಕ ಅಲ್ಪಸಂಖ್ಯಾತರ ವೋಟಿಗಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ ಎಂದು ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ವಾಗ್ದಾಳಿ ನಡೆಸಿದರು.ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರಭಕ್ತಿ ಎಂಬುದು ನಮ್ಮ ರಕ್ತದಲ್ಲೇ ಇದೆ. ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ ಆಜಾದ್ ಅವರು ಸಾವರ್ಕರ್ ಅವರನ್ನು ವೀರ ಎಂದು ಸಂಬೋಧಿಸಿದ್ದಾರೆ. ಸಾವರ್ಕರ್ ಅವರ ಹೋರಾಟ, ದೇಶಭಕ್ತಿ, ತ್ಯಾಗ ಎಂಥದ್ದು ಎಂಬುದು ಇಡೀ ನಾಡಿಗೆ ಗೊತ್ತಿದೆ. ಶಿವಾಜಿ ಮಹಾರಾಜರು, ರಾಣಿ ಚೆನ್ನಮ್ಮ, ಶ್ರೀಕೃಷ್ಣದೇವರಾಯ ಮುಂತಾದವರು ನಮ್ಮ ಪೂರ್ವಜರು ಎಂದರು.ಟಿಪ್ಪುವನ್ನು ಮೂರು ಬಾರಿ ಮರಾಠರು ಸೋಲಿಸಿದ್ದಾರೆ. ಹೀಗಾಗಿ ಟಿಪ್ಪು ನಿಜವಾದ ವೀರ ಅಲ್ಲ, ನಿಜವಾದ ವೀರರು ಮರಾಠರು. ನಮ್ಮೆಲ್ಲರ ರಕ್ತ ಒಂದೇ, ನಾವೆಲ್ಲರೂ ಒಂದೇ ಎಂಬ ಭಾವ ನಮ್ಮದು. ನಾವು ಶ್ರೀರಾಮ, ಶ್ರೀಕೃಷ್ಣ, ದೇವಿಯನ್ನು ಪೂಜಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಷ್ಟ್ರಭಕ್ತ ಸಾವರ್ಕರ್ ಅವರನ್ನು ಟೀಕೆ ಮಾಡುತ್ತಾರೆ, ಫೋಟೊ ತೆಗೆಯುತ್ತೇನೆ ಅಂತಾರೆ. ದೇಶದ ಇತರೆಡೆ ಕಾಂಗ್ರೆಸ್ ನಾಯಕರು ಸಾವರ್ಕರ್ ಅವರನ್ನು ಹೊಗಳುತ್ತಿದ್ರೆ, ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರ ತೆಗಳುತ್ತಿದ್ದಾರೆ ಎಂದು ಕಿಡಿಕಾರಿದರು.ನಾವು ನಮ್ಮ ಮನೆಗಳಿಗೆ "ಸಾವರ್ಕರ್ ಸದನ " ಅಂತ ನಾಮಫಲಕ ಹಾಕುತ್ತೇವೆ, ನಿಮಗೆ ತಾಕತ್ತಿದ್ದರೆ "ಟಿಪ್ಪು ಸದನ " ಅಂತ ಹಾಕಿಕೊಳ್ಳಿ ಎಂದು ಸವಾಲು ಹಾಕಿದರು.
ಈ ದೇಶಕ್ಕೆ ಭವ್ಯ ಭವಿಷ್ಯವಿದೆ. ಸಾಧು ಸಂತರ ಪುಣ್ಯಭೂಮಿ. ಅವರು ತ್ಯಾಗಿಗಳಾದರೆ, ನಾವು ಭೋಗಿಗಳು. ಸ್ವಾತಂತ್ರ್ಯ ಹೋರಾಟಗಾರರನ್ನು ಹೀಯಾಳಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಕೇವಲ ಮತಕ್ಕಾಗಿ, ಅಧಿಕಾರಕ್ಕಾಗಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಈ ದೇಶದ ರಾಮ ಭಕ್ತರು ಗುಲಾಮಗಿರಿ ಸಂಕೇತವಾದ ಬಾಬ್ರಿ ಮಸೀದಿ ಒಡೆದು ಹಾಕಿದರು. ಜನವರಿಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯಾಗಲಿದೆ. ಸಾಧು ಸಂತರನ್ನು ಜಾತಿವಾದಿಗಳು ಅಂತ ಜರಿಯುತ್ತಾರೆ. ಸೀತೆ, ಸಾವಿತ್ರಿ ಹುಟ್ಟಿದ ನಾಡಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ನಿಲ್ಲಬೇಕು. ಆಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂದರು.
ಇಲ್ಲಿಯ ಗಾಳಿ, ನೀರು, ಅನ್ನ ತಿಂದು ಕೆಲವರು ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗುತ್ತಾರೆ. ಅಂಥವರಿಗೆ ಇಲ್ಲಿ ಬದುಕಲು ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರಭಕ್ತರ ಬಳಗದ ಗೌರವಾಧ್ಯಕ್ಷ ಕೆ.ಇ. ಕಾಂತೇಶ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಧ್ವಜ ಹಾರಿಸುವ ತೀರ್ಮಾನ ತೆಗೆದುಕೊಂಡಾಗ ಮೊದಲ ಬಾರಿ ಹಾರಿಸಿದ್ದು ಹಾವೇರಿಯಲ್ಲಿ ಎಂಬುದು ಹೆಮ್ಮೆಯ ಸಂಗತಿ. ಸರ್ವಜ್ಞ, ಸಂತ ಶಿಶುನಾಳ ಷರೀಫ, ಕನಕದಾಸ ಮುಂತಾದವರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಅಪ್ರತಿಮ ದೇಶಭಕ್ತಿಯ ಬಗ್ಗೆ ನಾಡಿನ ಜನರಿಗೆ ತಿಳಿದಿದೆ. ಈ ದೇಶ ಬರುವ ದಿನಗಳಲ್ಲಿ ಹಿಂದೂ ರಾಷ್ಟ್ರ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಸಾವರ್ಕರ್ ಚಿಂತನೆ ಕುರಿತಾಗಿ ವಾಗ್ಮಿ ಹಾಗೂ ರಾಷ್ಟ್ರವಾದಿ ಚಿಂತಕ ಕಿರಣ ರಾಮ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಹಾವೇರಿಯ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಬಿ.ಜಿ. ಗೌರಿಮನಿ ಹಾಗೂ ಮಲ್ಲೇಶಪ್ಪ ಅಂಗಡಿ ದಂಪತಿಯನ್ನು ಗೌರವಿಸಲಾಯಿತು.
ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಇದ್ದರು.ಭವ್ಯ ಮೆರವಣಿಗೆ:
ಸಾತ್ಯಕಿ ಸಾವರ್ಕರ್ ಅವರನ್ನು ಹಾವೇರಿಯ ನೂರಾರು ಮಾತೆಯರು ಪೂರ್ಣಕುಂಭದ ಮೂಲಕ ಸ್ವಾಗತ ಮಾಡಿ, ನಗರದ ಹುಕ್ಕೇರಿಮಠದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ಕರೆತಂದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ನೂರಾರು ವಿದ್ಯಾರ್ಥಿನಿಯರು ಸಮೂಹ ಗಾಯನದಲ್ಲಿ ಸಾವರ್ಕರ್ ವಿರಚಿತ "ಜಯೋಸ್ತುತೆ " ಸೇರಿದಂತೆ ದೇಶಭಕ್ತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.