ಈ ಹಿಂದೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಹೀಗೇ ಹಿಂದೂ ವಿರೋಧಿ ನೀತಿ ಅನುಸರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ?.
ಹುಬ್ಬಳ್ಳಿ:
ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕಿದವರ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿರುವುದು ತುಷ್ಟೀಕರಣದ ಪರಾಕಾಷ್ಠೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಭಾನುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಕು ಹರಿಯುವ ಮೊದಲೇ 6 ಗಂಟೆಗೂ ಮುನ್ನ ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸ್ ಹಾಕುವುದು ತಪ್ಪೇ? ಹನುಮಾನ್ ಚಾಲೀಸ್ ಪಠಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಎಂದರು.
ಈ ಹಿಂದೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಹೀಗೇ ಹಿಂದೂ ವಿರೋಧಿ ನೀತಿ ಅನುಸರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಕೂಡಲೇ ಹನುಮಾನ್ ಚಾಲೀಸ್ ಪಠಿಸಿದವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರದ ಅನುದಾನ ಹಂಚಿಕೆ ಬಗ್ಗೆ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಅನುದಾನ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎನ್ನುತ್ತಿದ್ದಾರೆ. ಬಹಿರಂಗ ಚರ್ಚೆ ಎಂದರೇನು? ಸಾರ್ವಜನಿಕರನ್ನು ಕರೆತಂದು ಹೊಡೆದಾಡುವುದು ಇರುತ್ತದೆಯೇ? ಮಾಧ್ಯಮಗಳ ಮೂಲಕ ಸದ್ಯ ನಡೆಯುತ್ತಿರುವುದು ಬಹಿರಂಗ ಚರ್ಚೆ ಅಲ್ಲವೇ ಎಂದು ಪ್ರಶ್ನಿಸಿದರು.
ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ:
ಯುಪಿಎ ಕಾಲದ ಅಧಿಕಾರದ ಅವಧಿಯಲ್ಲಿ ನಾವು (ರಾಜ್ಯ) ಎಷ್ಟು ಬರ ಪರಿಹಾರ, ಅತಿವೃಷ್ಟಿ ಪರಿಹಾರ ಕೇಳಿದ್ದೇವು? ಅವರು ಎಷ್ಟು ಕೊಟ್ಟಿದ್ದಾರೆ? ಎನ್‌ಡಿಎ ಅವಧಿಯಲ್ಲಿ ರಾಜ್ಯ ಸರ್ಕಾರ ಎಷ್ಟು ಕೇಳಿದೆ? ಎನ್‌ಡಿಎ ಸರ್ಕಾರ ಎಷ್ಟು ಕೊಟ್ಟಿದೆ ಎಂಬುದು ಗೊತ್ತಾಗಲಿದೆ. ನಾವು ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸಚಿವ ಜೋಶಿ ಕಾಂಗ್ರೆಸಿಗರಿಗೆ ಪ್ರತಿ ಸವಾಲು ಹಾಕಿದರು.
ನೀವೇನು ಸತ್ಯ ಹರಿಶ್ಚಂದ್ರರಾ?
ಚೀನಾಕ್ಕೆ ಭಾರತ ಭೂಮಿ ಬಿಟ್ಟುಕೊಟ್ಟಿದೆ ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಜೋಶಿ, ನೀವೇನು ಸತ್ಯ ಹರಿಶ್ಚಂದ್ರರಾ? ಹಾಗಿದ್ದರೆ ಜನ ನಿಮ್ಮನ್ನು ಯಾಕೆ ಮೂಲೆಗುಂಪು ಮಾಡುತ್ತಿದ್ದರು? ನೀವು ಹುಚ್ಚರಂತೆ ಮಾತನಾಡಿದ್ದಕ್ಕೆ ಜನ ನಿಮ್ಮನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.