ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಮುಖ್ಯಮಂತ್ರಿ ಹೇಳಿಕೆಯನ್ನು ಗಮನಿಸಿದರೆ ಹಿಂದೂಗಳ ಮತ ಪಡೆಯದೆ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರಿಗೆ ಕೇಸರಿ ಕಂಡರೆ ಆಗೋಲ್ಲ. ಕಿತ್ತು ಬಿಸಾಕುತ್ತಾರೆ. ಎಲ್ಲೋ ಒಂದು ಕಡೆ ಅವರೇ ಗಲಾಟೆಗಳಿಗೆ ಕುಮ್ಮಕ್ಕು ನೀಡುತ್ತಿರುವಂತೆ ಕಂಡುಬರುತ್ತಿದೆ. ರಾಜ್ಯಸರ್ಕಾರವೇ ಇದರ ಹೊಣೆ ಹೊರಬೇಕು ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಆರಕ್ಷಕ ಅಧೀಕ್ಷಕರು ಭಾನುವಾರ ಸಂಜೆ ನಡೆದಿರುವ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಂದು ಕೋಮಿನ ಜನ ಹಿಂದೂಗಳು ಮೆರವಣಿಗೆ ಮಾಡಬಾರದು ಅಂತ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆಂದು ಉಲ್ಲೇಖಿಸಿದ್ದಾರೆ. ಇದರಿಂದಲೇ ದುಷ್ಕರ್ಮಿಗಳ ಅಟ್ಟಹಾಸ ಎಷ್ಟರಮಟ್ಟಿಗೆ ಇದೆ ಎನ್ನುವುದು ಗೊತ್ತಾಗುತ್ತದೆ. ಹಿಂದೂ ಮಹಿಳೆಯರು ಯಾವತ್ತು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿರಲಿಲ್ಲ. ಮದ್ದೂರಿನಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ರಸ್ತೆಯಲ್ಲಿ ಹೆಣ್ಣು ಮಕ್ಕಳು ನಡೆದುಕೊಂಡು ಹೋಗುವುದಕ್ಕೆ ಆಗುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಮಹಿಳೆಯರು ಹೋರಾಟದ ಅಖಾಡ ಪ್ರವೇಶಿಸಿದ್ದಾರೆ ಎಂದರು.ಬಿಜೆಪಿಯವರು ಕೋಮು ಸೌಹಾರ್ದತೆ ಕದಡುತ್ತಿದ್ದಾರೆಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಮಸೀದಿಯಲ್ಲಿ ಕಲ್ಲು ಇಟ್ಟುಕೊಂಡಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಇವತ್ತು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದ ಅವರು, ಭದ್ರಾವತಿ ಶಾಸಕರ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹದ್ದು. ಇಂತಹ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತಿದೆ ಎಂದು ಟೀಕಿಸಿದರು.
ಭಾನುವಾರ ರಾತ್ರಿ ನಡೆದ ಕಲ್ಲುತೂರಾಟಕ್ಕೆ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಅದಕ್ಕೆ ಈ ಘಟನೆ ಗೃಹ ಸಚಿವರಿಗೆ ಸಣ್ಣಪುಟ್ಟ ಘಟನೆ ಎಂದೆನಿಸಿದೆ. ಆ ಸ್ಥಾನಕ್ಕೆ ಗೌರವ ಇದ್ದರೆ ಮದ್ದೂರಿಗೆ ಬನ್ನಿ. ಇಲ್ಲಿನ ಶಾಸಕರಿಗೆ ಸ್ವಲ್ಪನೂ ಜವಾಬ್ದಾರಿ ಇಲ್ಲ, ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ. ಕ್ಷೇತ್ರದ ಜನರ ಹಿತಾಸಕ್ತಿಗಿಂತ ಮೋಜೇ ಅವರಿಗೆ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.