- 8 ಅಂತಸ್ತಿನ ಕಟ್ಟಡ 10 ವರ್ಷಕ್ಕೆ ಭೋಗ್ಯಕ್ಕೆ- ಟ್ರಂಪ್ ತೆರಿಗೆ ಭೀತಿ ನಡುವೆಯೂ ಹೂಡಿಕೆ
- 2.7 ಲಕ್ಷ ಚದರಡಿ ಕಟ್ಟಡವನ್ನು ಭೋಗ್ಯಕ್ಕೆ ಪಡೆದ ಆ್ಯಪಲ್ ಕಂಪನಿ
- ಬೆಂಗಳೂರಿನ ವಸಂತನಗರದಲ್ಲಿ ಎಂಬಿಸಿ ಗ್ರೂಪ್ ಕಟ್ಟಡ ಲೀಸ್‌ಗೆ- ಮಾಸಿಕ 6.3 ಕೋಟಿ ರು.ನಂತೆ 1000 ಕೋಟಿ ರು.ಗೆ ಭೋಗ್ಯಕ್ಕೆ
- ಈಗಾಗಲೇ ಇದಕ್ಕಾಗಿ 31.6 ಕೋಟಿ ರು. ಮುಂಗಡ ಹಣ ಪಾವತಿ===
ಪಿಟಿಐ ನವದೆಹಲಿಐಫೋನ್ ಸೇರಿ ವಿಶ್ವದ ಖ್ಯಾತ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಕಂಪನಿಯಾದ ಅಮೆರಿಕ ಮೂಲದ ಆ್ಯಪಲ್ ಬೆಂಗಳೂರಿನಲ್ಲಿ ಕಚೇರಿ ತೆರೆಯಲು 2.7 ಲಕ್ಷ ಚದರಡಿ ಜಾಗವನ್ನು ಭೋಗ್ಯಕ್ಕೆ (ಲೀಸ್‌ಗೆ) ಪಡೆದಿದ್ದು, 10 ವರ್ಷಕ್ಕೆ 1000 ಕೋಟಿ ರು. ಬಾಡಿಗೆ ಕೊಡಲಿದೆ ಎಂದು ಪ್ರೋಪ್‌ಸ್ಟ್ಯಾಕ್ ವಿಶ್ಲೇಷಿಸಿದೆ.
ದತ್ತಾಂಶ ವಿಶ್ಲೇಷಕ ಪ್ರೋಪ್‌ಸ್ಟ್ಯಾಕ್ ಪರಾಮರ್ಶಿಸಿರುವ ದಾಖಲೆಗಳ ಪ್ರಕಾರ ಆ್ಯಪಲ್ ಕಂಪನಿಯು ಎಂಬೆಸಿ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಎಂಬೆಸಿ ಜೆ಼ನಿತ್ ಕಟ್ಟಡದಲ್ಲಿ 5ರಿಂದ 13ನೇ ಅಂತಸ್ತಿನವರೆಗೂ ಲೀಸ್‌ಗೆ ಪಡೆದಿದೆ. ಅದಕ್ಕಾಗಿ 31.57 ಕೋಟಿ ರು.ಗಳನ್ನು ಮುಂಗಡ ಹಣವಾಗಿ ಪಾವತಿಸಿದ್ದು, ಬಾಡಿಗೆ ವೆಚ್ಚವು ಪ್ರತಿ ವರ್ಷ ಶೇ.4.5ರಷ್ಟು ಹೆಚ್ಚಳವಾಗಲಿದೆ. ಶುರುವಿನಲ್ಲಿ ತಿಂಗಳಿನ ಬಾಡಿಗೆ 6.3 ಕೋಟಿ ರು. ಇರಲಿದೆ. ಹೀಗಾಗಿ ಪಾರ್ಕಿಂಗ್ ಶುಲ್ಕ, ನಿರ್ವಹಣೆ ವೆಚ್ಚವಾಗಿ ಆ್ಯಪಲ್ 10 ವರ್ಷಕ್ಕೆ 1000 ಕೋಟಿ ರು.ಗೂ ಅಧಿಕ ಬಾಡಿಗೆ ಕಟ್ಟಲಿದೆ ಎಂದು ಅದು ಹೇಳಿದೆ.ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಮಾಧಾನದ ನಡುವೆಯೂ ಆ್ಯಪಲ್ ಬೆಂಗಳೂರಿನಲ್ಲಿ ಜಾಗ ಪಡೆದಿದೆ.