ಬಿಪಿಎಲ್ ಪಡಿತರ ಚೀಟಿ ಹೊಂದಿದ ನಿವೇಶನ ರಹಿತರಿಂದ ಅರ್ಜಿ ಆಹ್ವಾನ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Jul 11, 2025, 01:47 AM IST
10ಕೆಎಂಎನ್ ಡಿ12 | Kannada Prabha

ಸಾರಾಂಶ

ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ .

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ಹೆಚ್ಚುವರಿ ನಿವೇಶನ ನೀಡಲು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ನಿವೇಶನ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ನೀಡಿರುವ ಅರ್ಜಿದಾರರ ಪಟ್ಟಿಯನ್ನು ವಿಮರ್ಶೆಗೆ ಒಳಪಡಿಸಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡಲಾಗುವುದು. ಇನ್ನೂ ಹೆಚ್ಚುವರಿ ನಿವೇಶನ ಹಂಚಲು ಅವಕಾಶವಿದ್ದು, ಕುಟುಂಬದಲ್ಲಿ ವಿಭಜನೆಗೊಂಡಿರುವವರಿಗೂ ದಾಖಲೆ ಆಧಾರದ ಮೇಲೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.

ಅರ್ಜಿ ಸ್ವೀಕೃತವಾದ ನಂತರ ಬೇಡಿಕೆಗೆ ಅನುಗುಣವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿವೇಶನದ ಮರು ವಿನ್ಯಾಸ ಕಾರ್ಯ ಸಧ್ಯದಲ್ಲಿಯೇ ಕೈ ಸೇರಲಿದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಿವೇಶನ ಹಂಚಿಕೆ, ಹನಿ ನೀರಾವರಿ ಯೋಜನೆ ಉದ್ಘಾಟನೆ, ಪ್ರಜಾ ಸೌಧ ನಿರ್ಮಾಣಕ್ಕೆ ಗುದ್ದಲಿ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಗ್ರಾಮ ಲೆಕ್ಕಾಧಿಕಾರಿಗಳಿಗೆ ಎಲ್ಲಾ ದಾಖಲೆಗಳನ್ನು ಇ- ಆಫೀಸ್‌ನಲ್ಲಿಯೇ ದಾಖಲು ಮಾಡಲು ಅನುಕೂಲವಾಗುವಂತೆ ಸರ್ಕಾರದ ವತಿಯಿಂದ ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು. ಎಲ್ಲಾ ಪತ್ರ ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ಮಾಡಬೇಕೆಂದು ಹೇಳಿದರು.

ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ ಎಂದರು.

ಸಾರ್ವಜನಿಕ ಕೆಲಸಗಳಿಗೆ ತಾಲೂಕು ಕಚೇರಿಯಲ್ಲಿ ಯಾರೂ ಅಲೆದಾಟ ನಡೆಸಬಾರದು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಮುಂದಿನ 2 ತಿಂಗಳಲ್ಲಿ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು. ಪ್ರತಿವಾರ ಜಿಲ್ಲಾಧಿಕಾರಿಗಳಿಂದ ತಾಲೂಕಿನ ಪ್ರಗತಿ ಬಗ್ಗೆ ಮಾಹಿತಿಯನ್ನು ಪಡೆಯಲಾಗುವುದು. ತಹಸೀಲ್ದಾರ್ ಸೇರಿದಂತೆ ಸಮರ್ಪಕವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ದ ನಿಯಮಾವಳಿ ಪ್ರಕಾರ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ತಹಸೀಲ್ದಾರ್ ಡಾ.ಎಸ್.ವಿ.ಲೊಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಇತರರು ಇದ್ದರು.

PREV