ನವಲಗುಂದ: ವಸತಿ ರಹಿತರು ಕರ್ನಾಟಕ ಒನ್ ಮೂಲಕ ಜು. 15ರ ಒಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಪಟ್ಟಣದಲ್ಲಿನ ವಸತಿ ರಹಿತರಿಗೆ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿವೇಶನ ನೀಡಲು ಅಣ್ಣಿಗೇರಿ ರಸ್ತೆಯಲ್ಲಿ ಈಗಾಗಲೇ 63 ಎಕರೆ ಭೂಮಿಯನ್ನು ಖರೀದಿಸಲಾಗಿದ್ದು, 2400ಕ್ಕೂ ಹೆಚ್ಚು ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಆಶ್ರಯ ನಿವೇಶನಗಳಿಗಾಗಿ ಈ ಹಿಂದೆ ಯಾರೇ ಅರ್ಜಿ ಸಲ್ಲಿಸಿದ್ದರೂ ಅವುಗಳು ಅನುರ್ಜಿತವಾಗಿವೆ. ಸರ್ಕಾರದ ಹೊಸ ನಿಯಮದಂತೆ ಅರ್ಹರು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಆಶ್ರಯ ಯೋಜನೆಯಡಿ ಹಕ್ಕು ಪತ್ರ ಪಡೆದವರು ಮನೆ ಕಟ್ಟಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಪಟ್ಟಣದಲ್ಲಿ ಒಳಚರಂಡಿ ಯೋಜನೆಗಾಗಿ ₹25 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಸ್ಥಳೀಯ ಪುರಸಭೆ ಕಟ್ಟಡ ಕಿರಿದಾಗಿದ್ದು, ನೂತನವಾಗಿ ಪುರಭವನ ನಿರ್ಮಾಣಕ್ಕಾಗಿ ಅಣ್ಣಿಗೇರಿ ಹಾಗೂ ನವಲಗುಂದ ಪಟ್ಟಣಕ್ಕೆ ₹7.5 ಕೋಟಿ ಮಂಜೂರಾಗಿದೆ ಎಂದರು.ಪಟ್ಟಣದಲ್ಲಿ 24×7 ಕಾಮಗಾರಿ ಮುಗಿಯುವ ಹಂತದಲ್ಲಿರುವುದರಿಂದ ರಸ್ತೆಗಳು ಹದಗೆಟ್ಟಿದ್ದು ಒಳಚರಂಡಿ ಯೋಜನೆ ಪೂರ್ಣಗೊಂಡ ನಂತರ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದರು.