ನೀರಾವರಿ ನಿಗಮಕ್ಕೆ ಐಎಎಸ್ ಅಧಿಕಾರಿಯನ್ನೇ ಎಂಡಿಯಾಗಿ ನೇಮಿಸಿ

KannadaprabhaNewsNetwork |  
Published : Jul 30, 2026, 02:00 AM IST
ವೀರೇಶ ಸೊಬರದಮಠ | Kannada Prabha

ಸಾರಾಂಶ

22 ಜಿಲ್ಲೆಗಳ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳು ಹಾಗೂ ಭೂಸ್ವಾಧೀನ ಪರಿಹಾರ ವಿತರಣೆ ಸೇರಿದಂತೆ ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇಂತಹ ಇಲಾಖೆಗೆ ಆಡಳಿತಾತ್ಮಕ ಅನುಭವ ಹೊಂದಿರುವ ಐಎಎಸ್ ಅಧಿಕಾರಿಯೇ ಮುಖ್ಯಸ್ಥರಾಗಬೇಕು.

ಹುಬ್ಬಳ್ಳಿ:

ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್‌ಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ನೇಮಕ ಮಾಡಿರುವುದು ಸರಿಯಲ್ಲ. ತಕ್ಷಣವೇ ಆ ನೇಮಕ ಹಿಂಪಡೆದು ಐಎಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಬೇಕೆಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 22 ಜಿಲ್ಲೆಗಳ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳು ಹಾಗೂ ಭೂಸ್ವಾಧೀನ ಪರಿಹಾರ ವಿತರಣೆ ಸೇರಿದಂತೆ ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇಂತಹ ಇಲಾಖೆಗೆ ಆಡಳಿತಾತ್ಮಕ ಅನುಭವ ಹೊಂದಿರುವ ಐಎಎಸ್ ಅಧಿಕಾರಿಯೇ ಮುಖ್ಯಸ್ಥರಾಗಬೇಕು ಎಂದು ಒತ್ತಾಯಿಸಿದರು.

ಬೆಳಗಾವಿಯ ಮುಖ್ಯ ಎಂಜಿನಿಯರ್ ಆಗಿದ್ದ ಬಿ.ಆರ್. ರಾಠೋಡ್ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳಿದ್ದು, ಅಂತಹವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿರುವುದು ಸರಿಯಲ್ಲ. ಈ ಕುರಿತು ಹಲವು ವರ್ಷಗಳಿಂದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆಯಲ್ಲಿ ಹುದ್ದೆಗಳಿಗೆ ಕೋಟ್ಯಂತರ ರುಪಾಯಿ ಲಂಚ ನೀಡಿ ನೇಮಕಾತಿ ನಡೆಯುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದ್ದು, ಈ ಕುರಿತು ದಾಖಲೆಗಳೊಂದಿಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಸರ್ಕಾರ ಕೂಡಲೇ ರಾಠೋಡ್ ಅವರ ನೇಮಕಾತಿ ರದ್ದುಗೊಳಿಸಿ ಐಎಎಸ್ ಅಧಿಕಾರಿಯನ್ನು ನೇಮಿಸಬೇಕು. ಇಲ್ಲದಿದ್ದರೆ ರೈತರು ಬೆಂಗಳೂರಿನಲ್ಲಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸುವ ಜತೆಗೆ ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿಗೆ ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ದಾಖಲೆ ಸಮೇತ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸೇನಾ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಮಲ್ಲಣ್ಣ ಆಲೇಕರ್, ನಾಗರಾಜ ಬಿಕ್ಕಣ್ಣವರ, ಗುರುಶಾಂತ ಕಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮಹದಾಯಿ ವಿವಾದ ಇತ್ಯರ್ಥಗೊಳಿಸಿ

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ 3.9 ಟಿಎಂಸಿ ಕುಡಿಯುವ ನೀರಿನ ಹಂಚಿಕೆಯನ್ನು ಶೀಘ್ರದಲ್ಲಿ ಬಳಸಿಕೊಳ್ಳಲು ಕೇಂದ್ರ ಪರಿಸರ ಇಲಾಖೆಯ ಷರತ್ತುಗಳನ್ನು ತಕ್ಷಣವೇ ಪೂರೈಸಬೇಕು ಎಂದು ವೀರೇಶ ಸೊಬರದಮಠ ಒತ್ತಾಯಿಸಿದರು. ಸುಪ್ರೀಂಕೋರ್ಟ್‌ನಲ್ಲಿ ಅನಗತ್ಯ ಮೇಲ್ಮನವಿ ಹಾಗೂ ವಿಳಂಬದ ಬದಲು ಕೇಂದ್ರ ಸರ್ಕಾರದ ಷರತ್ತುಗಳನ್ನು ಒಪ್ಪಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಹದಾಯಿ ವಿವಾದವನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವ ವಿಶ್ವಾಸವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವಸ್ಥಾನಗಳ ಹುಂಡಿಗೆ 360 ಡಿಗ್ರಿ ಸಿಸಿಟಿವಿ ಭದ್ರತೆ: ಎಡಿಸಿ ಝುಬೇರ್ ಸೂಚನೆ
ಶ್ರದ್ಧಾ, ಭಕ್ತಿಯಿಂದ ನಡೆದ ಗುರುಪೂರ್ಣಿಮೆ