ಸರ್ಕಾರಿ ಕಾಲೇಜುಗಳಿಗೆ ಶೀಘ್ರವೇ ಅತಿಥಿ ಉಪನ್ಯಾಸಕರ ನೇಮಿಸಿ

KannadaprabhaNewsNetwork |  
Published : Sep 27, 2025, 12:00 AM IST
26ಕೆಡಿವಿಜಿ1-ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ದಾವಣಗೆರೆ ಎಸಿ ಕಚೇರಿ ಎದುರು ಹಳೆ ಪಿಬಿ ರಸ್ತೆಯಲ್ಲೇ ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸಿರುವುದು. | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ತಕ್ಷಣವೇ ನೇಮಕಾತಿಗೆ ಒತ್ತಾಯಿಸಿ ಎಬಿವಿಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮುಖಂಡರು ಘೋಷಿಸಿದ್ದಾರೆ.

- ರಾಜ್ಯ ಸರ್ಕಾರ ವಿಳಂಬ ಧೋರಣೆ ಖಂಡಿಸಿ ಎಬಿವಿಪಿ ನೇತೃತ್ವದ ಪ್ರತಿಭಟನೆಯಲ್ಲಿ ಚಂದ್ರಶೇಖರ ಮರಬದ್‌ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ತಕ್ಷಣವೇ ನೇಮಕಾತಿಗೆ ಒತ್ತಾಯಿಸಿ ಎಬಿವಿಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮುಖಂಡರು ಘೋಷಿಸಿದರು.

ನಗರದ ಸರ್ಕಾರಿ ಪದವಿ ಕಾಲೇಜಿನಿಂದ ಎಸಿ ಕಚೇರಿವರೆಗೆ ಎಬಿವಿಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಎಸಿ ಕಚೇರಿ ರಸ್ತೆಯಲ್ಲೇ ಧರಣಿ ಕುಳಿತರು.

ವಿದ್ಯಾರ್ಥಿ ಮುಖಂಡ ಚಂದ್ರಶೇಖರ ಮರಬದ್‌ ಈ ಸಂದರ್ಭ ಮಾತನಾಡಿ, 2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಇದರನ್ವಯ ಕ್ರಮ ಕೈಗೊಳ್ಳದೇ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದರು.

ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ 432 ಪದವಿ ಕಾಲೇಜುಗಳಲ್ಲಿ 6 ಸಾವಿರ ಕಾಯಂ ಉಪನ್ಯಾಸಕರಲ್ಲಿ 3 ಸಾವಿರಕ್ಕಿಂತ ಹೆಚ್ಚು ಉಪನ್ಯಾಸಕರು ನಿವೃತ್ತಿ ಪಡೆದಿದ್ದಾರೆ. ಉಳಿದ 3 ಸಾವಿರ ಕಾಯಂ ಉಪನ್ಯಾಸಕರೊಂದಿಗೆ 12 ಸಾವಿರ ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ನಡೆಯುತ್ತಿದ್ದವು. ಗುಣಮಟ್ಟದ ಶಿಕ್ಷಣ ನೀಡುವಿಕೆ ಸರ್ಕಾರದ ಕರ್ತವ್ಯ. ಆದರೆ, ಸರ್ಕಾರಗಳು ಕರ್ತವ್ಯಪ್ರಜ್ಞೆ ಮರೆತಂತಿದೆ ಎಂದು ಕಿಡಿಕಾರಿದರು.

2025-26ನೇ ಸಾಲಿನಲ್ಲಿ ಖಾಲಿ ಇರುವ 12 ಸಾವಿರ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು 55 ಸಾವಿರ ಅರ್ಜಿ ಮಾತ್ರ ಸಲ್ಲಿಕೆ ಆಗಿವೆ. ಈಗಾಗಲೇ ನಮ್ಮ ಎಲ್ಲ ವಿ.ವಿ.ಗಳ ತರಗತಿ ಪ್ರಾರಂಭವಾಗಿ 2 ತಿಂಗಳಾದರೂ ಈವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿಯಾಗಿಲ್ಲ. ಸರಿಯಾಗಿ ತರಗತಿ ನಡೆಯುತ್ತಿಲ್ಲ. ಪದವಿ ಕಾಲೇಜುಗಳಿಗೆ ಕಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಷ್ಟು ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ, ಕನಿಷ್ಠ ಪಕ್ಷ ಹೈಕೋರ್ಟ್‌ನ ಮಧ್ಯಂತರ ಆದೇಶದಂತೆ ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ತಕ್ಷಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪದವಿ ಕಾಲೇಜುಗಳಲ್ಲಿ ಕಾಯಂ ಪ್ರಾಚಾರ್ಯರ ನೇಮಕಾತಿಯೂ ಇಲ್ಲದೇ ಕಾಯಂ ಉಪನ್ಯಾಸಕರ ನೇಮಕಾತಿಗೆ ಅವಕಾಶವೇ ಇಲ್ಲದಂತಾಗಿದೆ. ಕನಿಷ್ಠಪಕ್ಷ ಅರ್ಹ ಅತಿಥಿ ಉಪನ್ಯಾಸಕರೂ ಇಲ್ಲದೇ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆ ಬುಡಮೇಲಾಗುತ್ತಿದೆ. ವಿ.ವಿ.ಗಳಿಂದ ಹೊರಬರುತ್ತಿರುವ ಪದವೀಧರರ ಭವಿಷ್ಯ ಅತಂತ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನು ಕೆಲ ವರ್ಷಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳನ್ನು ಸಂಪೂರ್ಣ ನಿರ್ನಾಮ ಮಾಡಲು ಸರ್ಕಾರ ಪಣ ತೊಟ್ಟಂತಿದೆ. ಇದು ನಾಡಿನ ಶೈಕ್ಷಣಿಕ ವ್ಯವಸ್ಥೆಯ ದುರ್ದೈವ. ಪದವಿ ಶಿಕ್ಷಣ ಬಲಪಡಿಸಿ, ಶೈಕ್ಷಣಿಕ ಕ್ಷೇತ್ರ ಆದ್ಯತಾ ವಲಯವೆಂದು ಪರಿಗಣಿಸಿ, ಅಗತ್ಯ ಕ್ರಮ ಕೈಗೊಂಡು ರಾಜ್ಯದ ವಿದ್ಯಾರ್ಥಿಗಳ ಹಿತಕಾಯಬೇಕು. ಈಗಾಗಲೇ 20 ಸಾವಿರಕ್ಕಿಂತ ಹೆಚ್ಚು ಅರ್ಹ ಅಭ್ಯರ್ಥಿಗಳು ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದು ಸರ್ಕಾರಿ ಬೋಧಕರಾಗಿ ಸೇವೆ ಸಲ್ಲಿಸಲು ತಯಾರಿದ್ದಾರೆ ಎಂದು ಚಂದ್ರಶೇಖರ ಮರಬದ ಹೇಳಿದರು.

ಎಬಿವಿಪಿ ಮುಖಂಡರಾದ ವಿಜಯ್, ಚಂದು, ಮನೋಜ, ಪ್ರಜ್ವಲ್, ವಿಜಯ್, ಪಲ್ಲವಿ, ವಿಜಯಕುಮಾರ, ನಿಂಗರಾಜ, ವೈಷ್ಣವಿ, ಮದನ್, ನವೀನ, ಆದರ್ಶ, ನಾಗರಾಜ, ವಿನಾಯಕ, ಬಸವರಾಜ, ಮೋಹನ, ಸರಸ್ವತಿ, ತಪಶ್ರೀ, ಅನಿತಾ, ವೆಂಕಟೇಶ, ಡಿ.ವಿ.ನಾಗರಾಜ, ಕೊಟ್ರೇಶ ಇತರರು ಇದ್ದರು.

- - -

(ಬಾಕ್ಸ್‌)

* (ಆಗ್ರಹಗಳೇನು?) - ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

- ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸಲು ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದ ಅತಿಥಿ ಉಪನ್ಯಾಸಕರನ್ನೇ ನೇಮಿಸಿಕೊಳ್ಳಬೇಕು.

- ವಿ.ವಿ.ಗಳಿಂದ ಹೊರಬರುತ್ತಿರುವ ಪದವೀಧರರ ಭವಿಷ್ಯ ಅತಂತ್ರವಾಗದಂತೆ ರಾಜ್ಯ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು.

- - -

-26ಕೆಡಿವಿಜಿ1:

ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಶುಕ್ರವಾರ ದಾವಣಗೆರೆಯಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ