ಕನ್ನಡಪ್ರಭ ವಾರ್ತೆ ಬಳ್ಳಾರಿ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ರಾಜ್ಯದಲ್ಲಿ ಒಟ್ಟು 5240 ಸರ್ಕಾರಿ ಪ್ರೌಢಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲ ಸಹಪಠ್ಯ ವಿಷಯಗಳ ಬೋಧಕರ ಸಂಖ್ಯೆ 1500 ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಪ್ರತಿ ಮಗುವಿಗೂ ಈ ವಿಷಯಗಳಲ್ಲಿ ಅರಿವು ತರಬೇತಿ ಬೇಕೆಂದ ಮೇಲೆ ಕಡಿಮೆ ದಾಖಲಾತಿಯ ಕಾರಣಕ್ಕೆ ಅಲ್ಲಿಂದ ಶಿಕ್ಷಕರನ್ನು ವರ್ಗಾಯಿಸುವ ಕ್ರಮವೇ ಅವೈಜ್ಞಾನಿಕವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಶಾಲೆಗಳಲ್ಲಿಂದು ಸಹಪಠ್ಯ ವಿಷಯಗಳ ಬೋಧನೆಗೆ ಶಿಕ್ಷಕರೇ ಇಲ್ಲದಂತಾಗಿದೆ ಎಂದರು.
ಅಪಾರ ಸಂಖ್ಯೆಯ ಅಭ್ಯರ್ಥಿಗಳು ಪ್ರತಿವರ್ಷ ಈ ವಿಷಯಗಳಲ್ಲಿ ಪದವಿ ಗಳಿಸಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಈ ವಿಷಯಗಳಿಗೆ 2008- 09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದೂವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022- 23 ರಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ, ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದ್ದು, ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ಮಕ್ಕಳಿಗೆ ಕನ್ನಡ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗ ಕಲೆಗಳು ಸಹ ಅವಶ್ಯಕವಾಗಿವೆ. ಆ ಮೂಲಕ ಮಾತ್ರವೇ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ಮಕ್ಕಳ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವುಗಳು ತುಂಬಾ ಅವಶ್ಯಕ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ಶಿಕ್ಷಣ ತಜ್ಞರು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಲಲಿತಕಲೆಗಳ ಅರಿವು ಮತ್ತು ತರಬೇತಿ ಸಿಗಲೆಂದು ಪರಿಣಿತಿ ಹೊಂದಿದ ಶಿಕ್ಷಕರ ನೇಮಕಾತಿಗೆ ಶಿಫಾರಸು ಮಾಡಿದ್ದಾರೆ. ಈ ಹಿಂದಿನ ಅನೇಕ ಶಿಕ್ಷಣ ಆಯೋಗಗಳೂ ಈ ಅಂಶವನ್ನು ಎತ್ತಿಹಿಡಿದಿವೆ ಎಂದರಲ್ಲದೆ, ರಾಜ್ಯ ಸರ್ಕಾರ ಸಂಗೀತ, ಚಿತ್ರಕಲಾ, ರಂಗಕಲಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನುನೇಮಕ ಮಾಡಿಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.