ಕರಾಟೆ, ಯೋಗಕ್ಕೆ ಒಬ್ಬರೇ ಶಿಕ್ಷಕರ ನೇಮಕ ಅವೈಜ್ಞಾನಿಕ

KannadaprabhaNewsNetwork |  
Published : Jul 03, 2026, 03:15 AM IST
Teacher

ಸಾರಾಂಶ

  ಸಮಗ್ರ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿನ ಕರಾಟೆ ಮತ್ತು ಯೋಗ ತರಬೇತಿಯನ್ನು ಒಬ್ಬರೇ ಶಿಕ್ಷಕರಿಂದ ನಡೆಸುವ ಪ್ರಸ್ತಾವನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂಪಡೆಯುವಂತೆ ಕರಾಟೆ ತರಬೇತುದಾರ ಶಿವಕುಮಾರ ಶಾರದಳ್ಳಿ ಆಗ್ರಹಿಸಿದ್ದಾರೆ.

 ಮುದ್ದೇಬಿಹಾಳ :  ಕೇಂದ್ರ ಪುರಸ್ಕೃತ ಪಿಎಂ-ಶ್ರೀ ಯೋಜನೆಯಡಿ ರಾಜ್ಯದ 590 ಸರ್ಕಾರಿ ಶಾಲೆಗಳಲ್ಲಿ 2026–27ನೇ ಸಾಲಿನ ಪ್ರೊಜೆಕ್ಟ್ ಅಪ್ರೂವಲ್ ಬೋರ್ಡ್ (ಪಿಎಬಿ) ಅನುಮೋದಿತ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಸಮಗ್ರ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿನ ಕರಾಟೆ ಮತ್ತು ಯೋಗ ತರಬೇತಿಯನ್ನು ಒಬ್ಬರೇ ಶಿಕ್ಷಕರಿಂದ ನಡೆಸುವ ಪ್ರಸ್ತಾವನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂಪಡೆಯುವಂತೆ ಕರಾಟೆ ತರಬೇತುದಾರ ಶಿವಕುಮಾರ ಶಾರದಳ್ಳಿ ಆಗ್ರಹಿಸಿದ್ದಾರೆ. 

ಈ ಹಿಂದೆ ರಾಜ್ಯ ಸರ್ಕಾರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವ ಜವಾಬ್ದಾರಿಯನ್ನು ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಹಿಸಿತ್ತು. ಆದರೆ, ದೈಹಿಕ ಶಿಕ್ಷಣ ಶಿಕ್ಷಕರಿಂದ ಗುಣಮಟ್ಟದ ಕರಾಟೆ ತರಬೇತಿ ನೀಡುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ, ಮೊದಲು ಅವರಿಗೆ ಕರಾಟೆ ತರಬೇತಿ ನೀಡಿ ನಂತರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಮತ್ತೊಂದು ಆದೇಶ ಹೊರಡಿಸಲಾಗಿತ್ತು. 

ಕ್ರಮಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ

ಈ ಎರಡೂ ಕ್ರಮಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಬಳಿಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಮನವಿ ಪರಿಗಣಿಸಿದ ಸರ್ಕಾರ, ಆಯಾ ಜಿಲ್ಲೆಗಳಲ್ಲಿರುವ ತರಬೇತಿ ಪಡೆದ ಕರಾಟೆ ಶಿಕ್ಷಕರ ಮೂಲಕವೇ ನೇರವಾಗಿ ಕರಾಟೆ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ತಂದಿತು. ಈ ಕ್ರಮ ಯಶಸ್ವಿಯಾಗಿದ್ದು, ಶಿಕ್ಷಣ ಇಲಾಖೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಹಾಗೂ ಅಲ್ಪ ಪ್ರಮಾಣದ ಗೌರವಧನದೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕರಾಟೆ ತರಬೇತಿ ನೀಡಲಾಗುತ್ತಿದೆ. 

2026–27ನೇ ಸಾಲಿನ ಹೊಸ ಸುತ್ತೋಲೆ

ಆದರೆ, 2026–27ನೇ ಸಾಲಿನ ಹೊಸ ಸುತ್ತೋಲೆಯಲ್ಲಿ ಕರಾಟೆ ಜೊತೆಗೆ ಯೋಗ ತರಬೇತಿಯನ್ನೂ ಸೇರಿಸಿ ಒಬ್ಬರೇ ಶಿಕ್ಷಕರಿಂದ ಎರಡೂ ತರಬೇತಿ ನೀಡುವಂತೆ ಸೂಚಿಸಲಾಗಿದೆ. ಇದು ಪ್ರಾಯೋಗಿಕ ವಾ, ವೈಜ್ಞಾನಿಕವಾಗಿಯೂ ಸೂಕ್ತವಲ್ಲ. ಯೋಗ ಮತ್ತು ಕರಾಟೆ ಎರಡೂ ವಿಭಿನ್ನ ತರಬೇತಿಗಳಾಗಿದ್ದು, ಅವುಗಳಿಗೆ ಪ್ರತ್ಯೇಕ ಪರಿಣತಿ ಹಾಗೂ ಬೋಧನಾ ವಿಧಾನ ಅಗತ್ಯವಿದೆ. ಆದ್ದರಿಂದ, ಎರಡೂ ವಿಷಯಗಳನ್ನು ಒಬ್ಬರೇ ಶಿಕ್ಷಕರು ಸಮರ್ಪಕವಾಗಿ ಬೋಧಿಸುವುದು ಸಾಧ್ಯವಿಲ್ಲ.

 ಹೀಗಾಗಿ, ಗುಣಮಟ್ಟ ಕಾಪಾಡುವ ಉದ್ದೇಶದಿಂದ ಪ್ರಸ್ತುತ ಸುತ್ತೋಲೆಯಲ್ಲಿನ ಈ ನಿಯಮವನ್ನು ಸರ್ಕಾರ ಮರುಪರಿಶೀಲಿಸಿ, ಕರಾಟೆ ಮತ್ತು ಯೋಗ ತರಬೇತಿಗೆ ಪ್ರತ್ಯೇಕ ಪರಿಣಿತ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕಿದೆ ಹಾಗೂ ಈ ಬಗ್ಗೆ ರಾಜ್ಯ ಕರಾಟೆ ಶಿಕ್ಷಕರ ಸಂಘದೊಂದಿಗೆ ಚರ್ಚಿಸಿ ಸೂಕ್ತ ಮಾರ್ಗಸೂಚಿಗಳನ್ನು ಸರ್ಕಾರ ನೀಡುವಂತೆ ಸಲಹೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೃಗಾಲಯಗಳು ಮನರಂಜನೆಗೂ ಸೈ, ಕಲಿಕೆಗೂ ಸೈ
ದಸರಾ: ಮೈಸೂರು ಅರಮನೆಗೆ ಸುಣ್ಣ - ಬಣ್ಣ