ದಾಂಡೇಲಿ: ಕಳೆದ ಅನೇಕ ವರ್ಷಗಳಿಂದ ವೈದ್ಯರ ಕೊರತೆಯಲ್ಲಿದ್ದ ಇಎಸ್ಐ ಆಸ್ಪತ್ರೆಗೆ ಮೇ 15ರೊಳಗೆ ಅಗತ್ಯ ವೈದ್ಯರನ್ನು ನಿಯೋಜಿಸುವುದಾಗಿ ರಾಜ್ಯ ಕಾರ್ಮಿಕ ವಿಮಾ ಆಯುಕ್ತ ದಿನೇಶ ಕುಮಾರ್ ಮತ್ತು ಸರ್ಕಾರದ ಕಾರ್ಮಿಕ ಕಾರ್ಯದರ್ಶಿ ಸಲ್ಮಾ ಫಾತಿಮಾ ಭರವಸೆ ನೀಡಿದರು.
ವೈದ್ಯರ ಕೊರತೆಯಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿರುವುದರಿಂದ ಕೂಡಲೇ ವೈದ್ಯರನ್ನು ನಿಯೋಜಿಸುವಂತೆ ಅವರು ಮನವಿ ನೀಡಿದರು.
ಆನಂತರ ಅಧಿಕಾರಿಗಳು ಸ್ಥಳೀಯ ಮುಖಂಡರು ಹಾಗೂ ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ದಾಂಡೇಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರ ಮಾತನಾಡಿ, ನಗರದ ಇಎಸ್ಐ ಆಸ್ಪತ್ರೆಯಡಿ ಸಾಕಷ್ಟು ಭೂಮಿ ಇದ್ದು, ಇಎಸ್ಐ ಆಸ್ಪತ್ರೆಯನ್ನು ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವಂತೆ ಮನವಿ ಮಾಡಿದರು. ಹತ್ತು ವರ್ಷಗಳಿಂದ ಕಾರ್ಮಿಕರ ವೇತನ ಮಿತಿ ₹21 ಸಾವಿರದ ವರೆಗೆ ಇದ್ದು, ಈ ಮಿತಿಯನ್ನು ಹೆಚ್ಚಳಗೊಳಿಸದೇ ಇರುವುದರಿಂದ ಸಾವಿರಾರು ಕಾರ್ಮಿಕರು ಇಎಸ್ಐ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕಾರ್ಮಿಕರ ವೇತನ ಮಿತಿ ಹೆಚ್ಚಿಸಿ, ಇಎಸ್ಐ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಇಎಸ್ಐ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ವೈದ್ಯರ ನಿಯೋಜನೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಮೇ 15ರೊಳಗೆ ವೈದ್ಯರನ್ನು ನಿಯೋಜಿಸದೇ ಇದ್ದಲ್ಲಿ ಮೇ 20ರ ಆನಂತರ ಇಎಸ್ಐ ಆಸ್ಪತ್ರೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ರಾಜ್ಯ ಕಾರ್ಮಿಕ ವಿಮಾ ಆಯುಕ್ತ ದಿನೇಶ ಕುಮಾರ್ ಮತ್ತು ಸರ್ಕಾರದ ಕಾರ್ಮಿಕ ಕಾರ್ಯದರ್ಶಿ ಸಲ್ಮಾ ಫಾತಿಮಾ ಅವರು, 2026 ಏ. 1ರಿಂದ ಇಎಸ್ಐ ಆಸ್ಪತ್ರೆಯನ್ನು ಸೊಸೈಟಿ ವ್ಯಾಪ್ತಿಯಡಿ ತರಲಾಗಿದೆ. ಇದು ತ್ವರಿತ ಸ್ಪಂದನೆಗೆ ಹಾಗೂ ಇಎಸ್ಐ ಆಸ್ಪತ್ರೆಗಳ ಬಲವರ್ಧನೆಗೆ ಪರಿಣಾಮಕಾರಿಯಾಗಲಿದೆ. ಹಣಕಾಸಿನ ನಿರ್ವಹಣೆ ಸೇರಿದಂತೆ ಎಲ್ಲ ಅನುಮೋದನೆಗಳನ್ನು ಸಮಿತಿಯೇ ನೇರವಾಗಿ ಮಾಡಲಿದ್ದು, ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು, ಸಮಿತಿಯಲ್ಲಿ ನಿರ್ಧರಿಸಿ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿರುವುದರಿಂದ ಇದು ಇಎಸ್ಐ ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯೋಜನವಾಗಲಿದೆ ಎಂದರು.