ಯಲ್ಲಾಪುರ: ನಮ್ಮ ಬದುಕಿಗೆ ಇತಿ-ಮಿತಿ ಹಾಕಿಕೊಳ್ಳದೇ ನಾವು ಮುನ್ನಡೆದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಿದೆ. ಕೇಂದ್ರ ಸಹಕಾರಿ ಇಲಾಖೆಯೂ, ಜಿಲ್ಲೆಯ ಸಹಕಾರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿಹೋಗಿದೆ. ಅಷ್ಟು ಸಹಕಾರಿ ತತ್ವ ನಮ್ಮಲ್ಲಿ ಬೆಳೆದು ಬಂದಿದೆ. ರೈತರ ಜೀವನಾಡಿಯಾದ ಸಹಕಾರಿ ಸಂಘ, ಅವುಗಳಿಗೆ ಪೂರಕವಾದ ಕೆಡಿಸಿಸಿ ಬ್ಯಾಂಕ್ ಕೂಡ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕೆಡಿಸಿಸಿ ಬ್ಯಾಂಕ್, ಸಹಕಾರಿ ಸಂಘ ಮತ್ತು ರೈತ ಇವು ತ್ರಿಟೈಯರ್ ವ್ಯವಸ್ಥೆ. ಪರಸ್ಪರ ಸಹಕಾರಿ ತತ್ವದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದೆ. ಆದರೆ ಕೇಂದ್ರದ ಹೊಸ ನೀತಿಯಿಂದಾಗಿ ನಬಾರ್ಡ್‌ನಿಂದ ಕೆಡಿಸಿಸಿ ಬ್ಯಾಂಕ್ ಸೇರಿದಂತೆ ರಾಜ್ಯದ ಎಲ್ಲ ಸಹಕಾರಿ ಸಂಸ್ಥೆ, ಬ್ಯಾಂಕುಗಳಿಗೆ ನೀಡುತ್ತಿರುವ ಸಹಾಯವನ್ನು ಶೇ. ೪೦ರಷ್ಟು ಕಡಿಮೆ ಮಾಡಿದೆ. ಇದರಿಂದ ನಮ್ಮ ಕೆಡಿಸಿಸಿ ಬ್ಯಾಂಕಿಗೆ ₹೯೧ ಕೋಟಿ ನಷ್ಟವಾಗಿದೆ. ನಾವು ₹೧೮ ಕೋಟಿ ಬೆಳೆಸಾಲ ನೀಡಿದ್ದೇವೆ. ಇದರಿಂದ ನಮ್ಮ ಬ್ಯಾಂಕಿಗೆ ಒಂದು ಕೋಟಿ ನಷ್ಟವಾಗಿದೆ. ಕಳೆದ ೪ ವರ್ಷಗಳಲ್ಲಿ ಕೇಂದ್ರದಿಂದ ನಬಾರ್ಡ್ ಮೂಲಕ ಬರುವ ಹಣ ಇಳಿಯುತ್ತಲೇ ಇದೆ. ಇಂದು ಶೇ. ೧೧ಕ್ಕೆ ಬಂದಿದೆ. ಈ ನೀತಿ ಬದಲಾಗದಿದ್ದರೆ ನಮ್ಮದೊಂದೇ ಅಲ್ಲ, ದೇಶದ ಎಲ್ಲ ಸಹಕಾರಿ ಸಂಸ್ಥೆಗಳು ಅತಂತ್ರಕ್ಕೆ ಹೋದೀತು. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು. ರಾಜ್ಯದಿಂದ ₹೭೮೦೦ ಕೋಟಿ ಬೇಡಿಕೆ ಸಲ್ಲಿಸಿದ್ದೆವು. ಆದರೆ ₹೩೭೬೫ ಕೋಟಿ ಮಾತ್ರ ಬಂದಿದೆ. ಇದರಿಂದ ರಾಜ್ಯದ ಸಹಕಾರಿ ಬ್ಯಾಂಕ್‌ಗಳಿಗೆ ₹೪.೫ ಕೋಟಿ ಹಾನಿಯಾಗಿದೆ. ನಾವೆಲ್ಲ ಸೇರಿ ಮುಖ್ಯಮಂತ್ರಿ ಜತೆ ಕೇಂದ್ರದ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ ಅವರು ಸ್ಪಂದಿಸಿಲ್ಲ. ಈ ವರ್ಷ ಇನ್ನೂ ಕಡಿಮೆ ಮಾಡಲಾಗಿದೆ.ರಾಜ್ಯ ಸರ್ಕಾರ ಎಂದೋ ನೀಡಿದ ಸಾಲಮನ್ನಾದ ಹಣ ಕೂಡ ಇನ್ನೂ ₹೫ ಕೋಟಿ ಕೆಡಿಸಿಸಿ ಬ್ಯಾಂಕಿಗೆ ಬರಬೇಕಾಗಿದೆ. ಹೀಗಾದರೆ ಸಹಕಾರಿ ಬ್ಯಾಂಕ್‌ಗಳು ಹೇಗೆ ಉಳಿಯುತ್ತವೆ? ಎಂದರು.
ಸಂಸ್ಥೆಯ ಉಪಾಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಲು ಸ್ವಾಗತಿಸಿದರು. ಪುಷ್ಪಾ ಮಾಳಕೊಪ್ಪ ಸಂಗಡಿಗರು ನಾಡಗೀತೆ ಹಾಡಿದರು. ಜಿ.ಎನ್. ಭಟ್ಟ ಶ್ರೀಗಳ ಸಂದೇಶ ವಾಚಿಸಿದರು. ರಶ್ಮಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ವಂದಿಸಿದರು.