ಹಿರಿಯ ನಾಗರಿಕರ ಕಾನೂನು ನೆರವಿಗೆ ವಕೀಲರ ನೇಮಕ

KannadaprabhaNewsNetwork |  
Published : Jun 19, 2025, 11:48 PM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಜಿಲ್ಲಾಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ನೆರವು ಒದಗಿಸಲು ನಾಲ್ಕು ವಕೀಲರನ್ನು ನೇಮಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದರು.

ಚಿತ್ರದುರ್ಗ: ಜಿಲ್ಲಾಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ನೆರವು ಒದಗಿಸಲು ನಾಲ್ಕು ವಕೀಲರನ್ನು ನೇಮಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹೊಂಬೆಳಕು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಡಿಯಂ ರಸ್ತೆಯ ಭಾರತ ಸೇವಾ ದಳ ಕಟ್ಟಡದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ 2007ರಲ್ಲಿ ಹಿರಿಯರ ನಾಗರಿಕ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ ಜಾರಿಗೊಳಿಸಿದೆ. ಇದರ ಅನ್ವಯ ಪ್ರತಿ ಉಪವಿಭಾಗಕ್ಕೆ ಒಂದು ನ್ಯಾಯಾಧೀಕರಣವನ್ನು ರಚಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳ ವಿಚಾರಣೆಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಸಾಧ್ಯವಾದಷ್ಟು ವಿಚಾರಣೆಯನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಲಾಗುವುದು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ 2016ರಲ್ಲಿ ಹಿರಿಯ ನಾಗರಿಕರ ನೆರವು ಯೋಜನೆಯನ್ನು ಜಾರಿಗೊಳಿಸಿದೆ. ಉಪವಿಭಾಗಾಧಿಕಾರಿ ಆಯಾ ಉಪವಿಭಾಗದಲ್ಲಿರುವ ಎಲ್ಲ ಹಿರಿಯ ನಾಗರಿಕರ ಕ್ಷೇಮದ ಪಾಲಕರಾಗಿರುತ್ತಾರೆ. ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದರೆ, ಆಸ್ತಿ ಪಡೆದು ವಂಚಿಸಿದರೆ ಅಥವಾ ಇನ್ಯಾಯವುದೇ ರೀತಿ ತೊಂದರೆ ಸಿಲುಕಿದರೆ ಹಿರಿಯ ನಾಗರಿಕರು ಉಪವಿಭಾಗಾಧಿಕಾರಿಗಳ ಮೊರೆ ಹೋಗಬಹುದು. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಿರಿಯ ನಾಗರಿಕರ ಮಾಹಿತಿಯನ್ನು ಠಾಣೆಯಲ್ಲಿ ಸಂಗ್ರಹಿಸಬೇಕು. ತಿಂಗಳಿಗೊಮ್ಮೆ ಹಿರಿಯ ನಾಗರಿಕರ ಸಭೆ ನಡೆಸಿ ಕುಂದುಕೊರತೆಯನ್ನು ಆಲಿಸಬೇಕು ಎಂದರು.

ತಂದೆ ತಾಯಿಗಳು ಸ್ವಂತ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಅಥವಾ ವಂಚನೆಗೆ ಒಳಗಾಗಿ ಆಸರೆ ಹಾಗೂ ನ್ಯಾಯಾ ಕೋರಿ ನ್ಯಾಯಾಲಯದ ಮೊರೆ ಬರುತ್ತಾರೆ. ಯುವ ಜನರು ತಂದೆ ತಾಯಿಗಳನ್ನು ನೋಡಿಕೊಳ್ಳುವ ನೈತಿಕ ಜವಾಬ್ದಾರಿ ಮರೆತು, ಅಮಾನವೀಯವಾಗಿ ವರ್ತಿಸುವುದು ಖೇಧಕರ ಸಂಗತಿಯಾಗಿದೆ. ಇದನ್ನು ಸರಿಪಡಿಸಲು ಇಂದಿನ ಮಕ್ಕಳಿಗೆ ಹಿರಿಯರ ಬಗ್ಗೆ ಗೌರವ ಆದರಗಳು ಮೂಡುವಂತೆ ಸಂಸ್ಕಾರಯುತವಾಗಿ ಬೆಳೆಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಆಸ್ತಿಗೊಸ್ಕರ ತಂದೆ ತಾಯಿಯರನ್ನು ದೂರ ಮಾಡಿಕೊಳ್ಳುವ ಪ್ರಕರಣಗಳು ಸಾಕಷ್ಟು ಇವೆ. ಇಂತಹ ಸಂದರ್ಭದಲ್ಲಿ ಕಾಯ್ದೆಯ ಅನುಸಾರ ಹಿರಿಯ ನಾಗರಿಕರು ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ವರ್ಷ ಜೂ.15 ಅನ್ನು ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಜಾಗೃತಿ ದಿನವಾಗಿ ಆಚರಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರ ರಕ್ಷಣೆಗೆ ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೊಳಿಸಿವೆ. ಕೇಂದ್ರ ಸರ್ಕಾರ ಸಹಾಯವಾಣಿ ಸಂಖ್ಯೆ 14567, ರಾಜ್ಯ ಸರ್ಕಾರ ಸಹಾಯವಾಣಿ ಸಂಖ್ಯೆ 1090 ಅನ್ನು ಹಿರಿಯ ನಾಗರಿಕರಿಗಾಗಿ ಆರಂಭಿಸಿವೆ. ಪ್ರತಿ ಜಿಲ್ಲೆಯಲ್ಲಿ ಹಿರಿಯ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸಿತ್ತಿವೆ. ಹಿರಿಯ ನಾಗರಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಉಪ ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಅವರು ಹಿರಿಯ ನಾಗರಿಕರ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ.ಆರ್ ಬಣಕಾರ್, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ಅಧ್ಯಕ್ಷ ಪ್ರೇಮನಾಥ್, ಗೌರವ ಅಧ್ಯಕ್ಷ ರಂಗಪ್ಪ ರೆಡ್ಡಿ, ಗ್ರೇಡ್-2 ತಹಶೀಲ್ದಾರ್ ನರಸಿಂಹಮೂರ್ತಿ, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಶಂಕರಪ್ಪ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ