ಆರೋಗ್ಯ ದಾಸೋಹ ಕಾರ್ಯವನ್ನು ಮುಂದುವರಿಸಲಿದ್ದೇವೆ: ಡಾ.ಟಿ.ಜಿ.ರವಿಕುಮಾರ್ ಪ್ರತಿಕ್ರಿಯೆ
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾದ್ಯಂತ ಏರ್ಪಡಿಸುತ್ತಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ಸೂಚಿಸಿ, ಅಭಿನಂದನಾ ಪತ್ರ ಕಳುಹಿಸಿದ್ದಾರೆ.
ಜ.3 ರಂದು ಬೆಂಗಳೂರಿನ ರಾಜಭವನಕ್ಕೆ ಆಹ್ವಾನಿಸಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ್ ಅವರೊಂದಿಗೆ ಶಿಬಿರಗಳ ಆಯೋಜನೆ ಕುರಿತಾಗಿ ರಾಜ್ಯಪಾಲರು ಚರ್ಚೆ ನಡೆಸಿದ್ದರು. ಈ ವೇಳೆ, ಜಗಳೂರಿನ ಮಾಜಿ ಶಾಸಕ ಟಿ.ಗುರುಸಿದ್ಧನಗೌಡ ಜತೆಗಿದ್ದು, ಪ್ರೀತಿ ಆರೈಕೆ ಟ್ರಸ್ಟ್ ನ ಆರೋಗ್ಯ ಸೇವೆಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದ್ದರು.ರಾಜ್ಯಪಾಲರಿಂದ ಪ್ರಶಂಸನಾ ಪತ್ರ ಬಂದಿರುವ ಬಗ್ಗೆ ಡಾ.ಟಿ.ಜಿ.ರವಿಕುಮಾರ್ ಪ್ರತಿಕ್ರಿಯಿಸಿ, ಮೂರು ವರ್ಷಗಳ ಹಿಂದೆ ಇದೇ ದಿನ ಪತ್ನಿ ಪ್ರೀತಿ ನಮ್ಮನ್ನು ಅಕಾಲಿಕವಾಗಿ ಅಗಲಿದರು. ಆ ದುಖಃವನ್ನು ಭರಿಸಿ, ಪ್ರೀತಿ ಅವರ ಸಾಮಾಜಿಕ ಸೇವಾಕಾರ್ಯ ತುಡಿತವನ್ನು ಈಡೇರಿಸಲು ಪ್ರೀತಿ ಆರೈಕೆ ಟ್ರಸ್ಟ್ ಆರಂಭಿಸಿದೆವು.
ಟ್ರಸ್ಟ್ ಪ್ರಾರಂಭದ ದಿನವೇ 30 ನಿವೃತ್ತ ಸೈನಿಕರಿಗೆ ಅಜೀವ ಪರ್ಯಂತ ಉಚಿತ ಚಿಕಿತ್ಸೆ ನೀಡಲಾರಂಭಿಸಿದೆವು. ಇದರ ಜತೆಗೆ, ಉಚಿತವಾಗಿ ಆರೋಗ್ಯ ಚಿಕಿತ್ಸೆ ನೀಡುವ ಜತೆಗೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಕಾಳಜಿ, ತಿಳುವಳಿಕೆ, ಮಾರ್ಗದರ್ಶನ, ಸಲಹೆ ನೀಡುವ ಉದ್ದೇಶದಿಂದ ಉಚಿತ ಶಿಬಿರ ಆರಂಭಿಸಿದೆವು. ಸರಿಯಾದ ಮಾಹಿತಿ ಇಲ್ಲದೆಯೇ ಹಠಾತ್ ಅನಾಹುತ ಆಗುವ ಬಗ್ಗೆ ಅರಿವು ಮೂಡಿಸುತ್ತ ನಮ್ಮ ಆರೋಗ್ಯ ದಾಸೋಹ ಕಾರ್ಯವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.ಜಿಲ್ಲೆಯ ಜನರಿಗೆ ಅರ್ಪಿಸುವೆ
ಈವರೆಗೂ ಜಿಲ್ಲಾದ್ಯಂತ 48 ಆರೋಗ್ಯ ಶಿಬಿರಗಳ ಆಯೋಜಿಸಿ, ಸರಿಸುಮಾರು 23 ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ದಾಸೋಹ ನೀಡಿದ್ದೇವೆ. ಇದನ್ನು ಗುರುತಿಸಿ ರಾಜ್ಯಪಾಲರು ಪ್ರಶಂಸನಾ ಪತ್ರ ನೀಡಿರುವುದು ಸಂತಸದ ಸಂಗತಿ. ಈ ಅಭಿನಂದನೆಯನ್ನು ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆಯ ನನ್ನ ಕುಟುಂಬ ಮತ್ತು ಜಿಲ್ಲೆಯ ಸಮಸ್ತ ಜನತೆಗೆ ಅರ್ಪಿಸುತ್ತೇನೆ.ಡಾ.ಟಿ.ಜಿ. ರವಿಕುಮಾರ್, ಆರೈಕೆ ಆಸ್ಪತ್ರೆ ಮುಖ್ಯಸ್ಥ