ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿನ ತೊಡಕು ನಿವಾರಣೆಗೆ ಸೂಕ್ತ ಕ್ರಮ

KannadaprabhaNewsNetwork |  
Published : May 14, 2026, 01:00 AM IST
ಹಗರಿಬೊಮ್ಮನಹಳ್ಳಿಯ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಮಿತಿಯ ತಾಲೂಕು ಆಧ್ಯಕ್ಷ ಗುರುಬಸವರಾಜ್ ಸೊನ್ನದ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಹಿಳೆಯರ ಉದ್ಯೋಗ ಸೃಷ್ಟಿಗೆ ನೆರವಾಗಿವೆ.

ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಹಿಳೆಯರ ಉದ್ಯೋಗ ಸೃಷ್ಟಿಗೆ ನೆರವಾಗಿವೆ. ಗ್ರಾಮೀಣ ಮಹಿಳೆಯರ ಬದುಕು ಮತ್ತು ಆರ್ಥಿಕ ಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ತಾಲೂಕಿನ ಐದೂ ಇಲಾಖೆಯ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಶ್ಲಾಘಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆಗಳ ಅನುಷ್ಠಾನದಲ್ಲಿರುವ ತೊಡಕುಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಅಂಗನವಾಡಿ ಕೇಂದ್ರಗಳಿಗೆ ಉಚಿತ ವಿದ್ಯುತ್ ಪೂರೈಕೆ, ಸ್ಥಳೀಯ ಬಸ್ ಡಿಪೋಗೆ ಹೆಚ್ಚುವರಿ ಬಸ್ ಪೂರೈಕೆ, ಸಿಬ್ಬಂದಿ ನೇಮಕಾತಿ, ಮತ್ತಿತರ ಬೇಡಿಕೆಗಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಸಭೆಯಲ್ಲಿ ಚರ್ಚಿಸಿ ಅಗತ್ಯ ಬಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಅಧಿಕಾರಿ ಬೋರೇಗೌಡರು ಮಾತನಾಡಿ, ತಾಲೂಕಿನ ೪೦೫೬೯ ಪಡಿತರ ಚೀಟಿಗಳನ್ನು ಹೊಂದಿರುವವರಲ್ಲಿ ೪೦೪೯೦ ಪಡಿತರ ಚೀಟಿ ಹೊಂದಿರುವವರು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿದ್ದಾರೆ ಎಂದರು.

ಸಾರಿಗೆ ಇಲಾಖೆಯ ಟ್ರಾಫಿಕ್ ನಿರೀಕ್ಷಕ ಸಂತೋಷ್ ನಾಯ್ಕ ಶಕ್ತಿ ಯೋಜನೆಯ ಕುರಿತು ಮಾತನಾಡಿ, ₹೧.೬೫ ಕೋಟಿ ಮಹಿಳೆಯರು ಯೋಜನೆಯ ಸೌಲಭ್ಯ ಪಡೆದಿದ್ದು, ₹೬೬.೩೮ ಕೋಟಿ ವಿನಿಯೋಗಿಸಲಾಗಿದೆ. ಬಸ್ ಹಿಂಬದಿಯಲ್ಲಿ ಅಳವಡಿಸಲಾಗಿದ್ದ ಮಾದಕ ವಸ್ತುಗಳ ಜಾಹಿರಾತು ಭಿತ್ತಿಗಳನ್ನು ತೆರವುಗೊಳಿಸಲಾಗಿದೆ. ಚಾಲಕ ಮತ್ತು ನಿರ್ವಾಹಕರು ಮಹಿಳಾ ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ವರ್ತಿಸುವ ಕುರಿತು ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ. ನಿಲ್ದಾಣದ ಶೌಚಾಲಯ ದುಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.

ಸಮಿತಿ ಸದಸ್ಯ ಗೌರಜ್ಜನವರ ಗಿರೀಶ್ ಮತ್ತಿತರರು ಕಳೆದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದ ಹಗರಿಕ್ಯಾದಿಗಿಹಳ್ಳಿ ಮತ್ತು ಪಟ್ಟಣದ ಹೊರವಲಯದ ಆದರ್ಶ ವಿದ್ಯಾಲಯದ ಬಳಿ ಬಸ್ ತಂಗುದಾಣ ನಿರ್ಮಾಣ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಿಡಿಮಿಡಿಗೊಂಡರು. ಗೆಸ್ಕಾಂ ಮೇಲ್ವಿಚಾರಕಿ ಅನುಪಮಾ, ಯುವ ನಿಧಿ ಯೋಜನೆಯ ವೆಂಕಟೇಶ್ ಮತ್ತು ಆಹಾರ ನಿರೀಕ್ಷಕಿ ಮಮತಾ ಹಿರೇಮಠ್, ಜಿಲ್ಲಾ ಸಮಿತಿ ಸದಸ್ಯ ಪರಶುರಾಮ್ ಮಾತನಾಡಿದರು.

ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಜಂದಿಸಾಬ್, ಸಮಿತಿಯ ಸದಸ್ಯರಾದ ಸಂತೋಷ್, ಸರ್ದಾರ್ ರಾಮಪ್ಪ, ಕೆ.ನಾಗಮ್ಮ, ಸುಧಾ, ವೆಂಕಟೇಶ್ ನಾಯ್ಕ, ಮೇಟಿ ಮಂಜುನಾಥ್, ರಾಘವೇಂದ್ರ ಪಾಲ್ಗೊಂಡಿದ್ದರು. ತಾಪಂ ಇಒ ಪಿ.ಕೆ. ವಿಶ್ವನಾಥ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ
ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ