ನೇಕಾರರ ಉಳಿವಿಗೆ ಸರ್ಕಾರದಿಂದ ಸೂಕ್ತ ನೆರವು

KannadaprabhaNewsNetwork |  
Published : Jun 05, 2025, 01:00 AM IST
ನೇಕಾರರ ಕುಂದು ಕೊರತೆ ಸಭೆ  ನೇಕಾರರ ಬೇಡಿಕೆಗಳಿಗೆ ಸಚಿವ ತಿಮ್ಮಾಪೂರ ಸ್ಪಂದನೆ | Kannada Prabha

ಸಾರಾಂಶ

ಜಿಲ್ಲೆಯ ನೇಕಾರರು ಹಾಗೂ ನೇಕಾರರ ಸಂಘಗಳ ಬೇಡಿಕೆಗಳನ್ನು ಆಲಿಸುವ ಮೂಲಕ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ನೇಕಾರರು ಹಾಗೂ ನೇಕಾರರ ಸಂಘಗಳ ಬೇಡಿಕೆಗಳನ್ನು ಆಲಿಸುವ ಮೂಲಕ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಜಿಪಂ ಸಭಾಭವನದಲ್ಲಿ ನಡೆದ ನೇಕಾರರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೇಕಾರರ ಸಮಸ್ಯೆಗಳು ನಿನ್ನೆ ಮೊನ್ನೆಯದಲ್ಲ. ಬಹಳ ವರ್ಷಗಳಿಂದ ಇದ್ದು, ಮೂಲವೃತ್ತಿ ಬಿಟ್ಟು ಬೇರೆ ಬೇರೆ ವೃತ್ತಿ ಕೈಗೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ. ಅಲ್ಲದೇ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಂದು ವೃತ್ತಿಗಳು ತಿಲಾಂಜಲಿಗೊಂಡಿರುತ್ತವೆ. ನೇಕಾರಿಕೆ ಕೂಡ ಅಂತಹ ಪರಿಸ್ಥಿತಿಗೆ ಬರುತ್ತಿದೆ. ಈ ಬಗ್ಗೆ ಜವಳಿ ಸಚಿವರ ಜೊತೆ ಚರ್ಚಿಸಿ ನೇಕಾರರ ವೃತ್ತಿ ಉಳಿವಿಗೆ ಮತ್ತು ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದಿಂದ ಸೂಕ್ತ ನೆರವು ಒದಗಿಸುವ ಭರವಸೆ ನೀಡಿದರು.

ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕ ಮಾದರಿ ಸೌಲಭ್ಯಗಳನ್ನು ಜಾರಿಮಾಡಿ ಗುರುತಿನ ಚೀಟಿ ನೀಡುವ ಬಗ್ಗೆ ಬೇಡಿಕೆಗೆ ಉತ್ತರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಟ್ಟಡ ಕಾರ್ಮಿಕರಿಗೆ ದೊರೆಯುವ ಸೌಲಭ್ಯ ನೇಕಾರರಿಗೆ ಕೊಡಲು ಅವಕಾಶವಿರುವುದಿಲ್ಲ ಎಂದಾಗ ಈಗಾಗಲೇ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 13183 ಕೈಮಗ್ಗ ಮತ್ತು 23735 ವಿದ್ಯುತ್ ಮಗ್ಗ ನೇಕಾರರಿಗೆ ಗುರುತಿನ ಚೀಟಿ ನೀಡಲಾಗಿದೆ. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 9 ನೇಕಾರರ ಪೈಕಿ 3 ಜನಕ್ಕೆ ತಲಾ ₹5 ಲಕ್ಷ ಪರಿಹಾರಧನ ವಿತರಿಸಲಾಗಿದೆ ಎಂದು ಉಪನಿರ್ದೇಶಕ ಪೀರಜಾದೆ ಸಭೆಗೆ ತಿಳಿಸಿದರು.

ರಾಜ್ಯದ ನೇಕಾರರಿಗೆ ಒಂದು ಬಾರಿ ಸಂಪೂರ್ಣ ಸಾಲ ಮನ್ನಾ, 55 ವರ್ಷ ಮೇಲ್ಪಟ್ಟ ನೇಕಾರರಿಗೆ ₹5 ಸಾವಿರ ಮಾಶಾಸನ ಜಾರಿ, ನಿವೇಶನ ಇಲ್ಲದ ನೇಕಾರರಿಗೆ ಕೆಎಚ್‌ಡಿಸಿ ನಿಗಮದಿಂದ ನಿವೇಶನ ಹಂಚಿಕೆ, ಕೇಂದ್ರ ಸರಕಾರ ಕಿಸಾನ್ ಸಮ್ಮಾನ ಯೋಜನೆಯಂತೆ ನೇಕಾರರಿಗೂ ಬುನಕರ ಸಮ್ಮಾನ ಯೋಜನೆ ಜಾರಿಗೆ, ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹೆಚ್ಚಿನ ಅನುದಾನ ನಿಗದಿ, ಅಸಂಘಟಿತ ವಲಯ ಕಾರ್ಮಿಕರ ಗುರುತಿನ ಚೀಟಿ ಹಂಚಿಕೆ, ನೇಕಾರರ ವಿವಿಧ ಯೋಜನೆಗಳಿಗೆ ಅನುದಾನವಿಲ್ಲದೇ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಬಜೆಟ್‌ನಲ್ಲಿ ಅನುದಾನ ನಿಗದಿ ಕುರಿತಂತೆ ಅನೇಕ ಬೇಡಿಕೆಗಳಿಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು.

ರೈಲು ಮತ್ತು ವಿಮಾನ ನಿಲ್ದಾಣದಲ್ಲಿ ನೇಕಾರರು ಉತ್ಪಾದಿಸಿದ ಉತ್ಪನ್ನಗಳನ್ನು ನೇರ ಮಾರಾಟ ಮಾಡಲು ಮಳಿಗೆಗಳನ್ನು ಹಾಕಲು ಅವಕಾಶ ದೊರಕಿಸುವ ಕಾರ್ಯವಾಗಬೇಕೆಂದಾಗ ಈ ಬಗ್ಗೆ ಸರಕಾರದ ಮಟ್ಟದಲ್ಲಿ ತಿರ್ಮಾಣ ಕೈಗೊಳ್ಳಬೇಕಾಗಿರುವುದರಿಂದ ಕೇಂದ್ರ ಸರಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಲಾಗುವುದೆಂದು ಸಚಿವರು ತಿಳಿಸಿದರು. 10 ಎಚ್‌ಪಿ ವರೆಗೆ ಉಚಿತ ವಿದ್ಯುತ್ ಬೇಡಿಕೆ ಬಗ್ಗೆಯೂ ಸಚಿವರ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೇಕಾರರಿಗೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ