ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದ್ದು, ಕ್ರೀಡಾಪಟುಗಳ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.ದಶಕಗಳ ಹಿಂದೆ ನಿರ್ಮಾಣವಾಗಿದ್ದ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಕಾಣದೆ ಸೊರಗಿತ್ತು. ಪ್ರೇಕ್ಷಕರ ಗ್ಯಾಲರಿ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಮೈದಾನದಲ್ಲಿ ಮಳೆ ಬಂದರೆ ನೀರು ಸಂಗ್ರಹಗೊಂಡು ಆಟೋಟಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೆ ಕ್ರೀಡಾಂಗಣದಲ್ಲಿ ರನ್ನಿಂಗ್ ಟ್ರ‍್ಯಾಕ್, ಕುಡಿವ ನೀರು, ಪ್ರೇಕ್ಷಕರ ಗ್ಯಾಲರಿ, ವಾಯು ವಿಹಾರಿಗಳಿಗೆ ವ್ಯವಸ್ಥೆ ಇಲ್ಲದಿರುವಿಕೆ ಸೇರಿ ಹಲವು ಮೂಲ ಸೌಕರ್ಯದಿಂದ ಕ್ರೀಡಾಂಗಣ ವಂಚಿತವಾಗಿತ್ತು.
₹೮.೫೦ ಕೋಟಿ ಅನುದಾನ: ಶಾಸಕ ಬಸವರಾಜ ರಾಯರಡ್ಡಿ ಮಾದರಿ ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ರಾಜ್ಯ ಸರ್ಕಾರ ೨೦೨೫-೨೬ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ೩೯೫ರಲ್ಲಿ ಘೋಷಿಸಿರುವಂತೆ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ₹ ೮.೫೦ ಕೋಟಿ ಅನುದಾನ ನೀಡುವ ಮೂಲಕ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ೨೦೨೫-೨೬ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಕಂಡಿಕೆ ೩೯೫ರಲ್ಲಿ ಘೋಷಿಸಿರುವಂತೆ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲೂಕು ಕ್ರೀಡಾಂಗಣವನ್ನು ₹೬ ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂಬ ಘೋಷಣೆಯ ಅನುಷ್ಠಾನಕ್ಕೆ ಸರ್ಕಾರದ ಅನುಮೋದನೆ ಹಾಗೂ ಆದೇಶ ಹೊರಡಿಸುವಂತೆ ಕೋರಿತ್ತು. ಆದರೆ ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಘೋಷಣೆಯಾದ ಪಟ್ಟಣದ ಕ್ರೀಡಾಂಗಣವನ್ನು ₹೮.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸಹಮತಿ ನೀಡಿ ಮೊದಲ ಹಂತದ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಲು ರಾಜ್ಯ ಸರ್ಕಾರ ಆದೇಶಿಸಿದೆ.
ಯಲಬುರ್ಗಾದಲ್ಲಿ ₹೮.೫೦ ಕೋಟಿ ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣವನ್ನು ಮಾದರಿ ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಎಲ್ಲ ಕ್ರೀಡಾಪಟುಗಳಿಗೆ ಅನುಕೂಲವಾಗಲಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ಹಲವು ದಿನಗಳಿಂದ ಅಭಿವೃದ್ಧಿ ಕಾಣದೇ ಆಟೋಟಕ್ಕೆ ತೊಂದರೆಯಾಗಿತ್ತು. ಈ ಕುರಿತು ಶಾಸಕರ ಗಮನಕ್ಕೆ ತಂದಾಗ ಕ್ರೀಡಾಪಟುಗಳೊಂದಿಗೆ ಕ್ರೀಡಾಂಗಣ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಿದ್ದರು. ಅದರಂತೆ ಶಾಸಕರು ಸರ್ಕಾರದಿಂದ ಅಭಿವೃದ್ಧಿಗೆ ಅನುದಾನ ಕೊಡಿಸಿದ್ದಾರೆ. ಮಾದರಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಕ್ರೀಡಾಪಟುಗಳ ಬಹುದಿನದ ಆಸೆ ಈಡೇರಿದಂತಾಗಿದೆ ಎಂದು ಯಲಬುರ್ಗಾ ಹಿರಿಯ ಕ್ರೀಡಾಪಟು ಸುಧೀರ ಕೊರ್ಲಹಳ್ಳಿ ಹೇಳಿದ್ದಾರೆ.