ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್) ಸ್ನಾತಕೋತ್ತರ ಪದವಿ (ಪಿಜಿ) ವಿಭಾಗ ಆರಂಭಕ್ಕೆ ಶೀಘ್ರದಲ್ಲಿಯೇ ಅನುಮತಿ ಸಿಗಲಿದೆ ಎಂದು ಯಿಮ್ಸ್ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಡಾ.ಸಂದೀಪ್ ರೆಡ್ಡಿ ಪಾಟೀಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್) ಸ್ನಾತಕೋತ್ತರ ಪದವಿ (ಪಿಜಿ) ವಿಭಾಗ ಆರಂಭಕ್ಕೆ ಶೀಘ್ರದಲ್ಲಿಯೇ ಅನುಮತಿ ಸಿಗಲಿದೆ ಎಂದು ಯಿಮ್ಸ್ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಡಾ.ಸಂದೀಪ್ ರೆಡ್ಡಿ ಪಾಟೀಲ್ ತಿಳಿಸಿದರು.
ತಮಗೆ ಪದೋನ್ನತಿ ಹೊಂದಿದ ಪ್ರಯುಕ್ತ ಮೆಡಿಕಲ್ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸಂದೀಪ್, ನನ್ನ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರೆಯಲು ಅಗತ್ಯ ಬೋಧಕರ ನೇಮಕ ಮಾಡಲಾಗಿದೆ. ಇಲ್ಲಿನ ಯಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ 150 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರ ಸಂಖ್ಯೆ 200ಕ್ಕೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಾನು ಸ್ಥಳೀಯನಾಗಿದ್ದು, ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲು ಗಮನ ನೀಡಿ, ಈಗಾಗಲೇ ಆಸ್ಪತ್ರೆಯಲ್ಲಿ ಅಪಘಾತ ತುರ್ತು ಚಿಕಿತ್ಸಾ ಘಟಕ, ಪ್ರತ್ಯೇಕ ಟಿಬಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ನರ್ಸಿಂಗ್ ಕಾಲೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಲಾಗಿದ್ದು, ಕಾಮಗಾರಿ ಅಭಿವೃದ್ಧಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಮೊದಲು ನಾವು ನಗರದಲ್ಲಿರುವ ಹೆರಿಗೆ ಆಸ್ಪತ್ರೆಗೆ ವೈದ್ಯರನ್ನು ಹಾಗೂ ಸಿಬ್ಬಂದಿ ನೇಮಕ ಮಾಡಿ ಉತ್ತಮ ಚಿಕಿತ್ಸೆ ನೀಡುತ್ತಿರುವುದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ. ಯಿಮ್ಸ್ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ಅನೇಕ ವಿಭಾಗಗಳನ್ನು ಆರಂಭಿಸಲಾಗಿದ್ದು, ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ತನ್ನ ಕಾರ್ಯಾರಂಭ ಮಾಡಲಿದೆ. ರಕ್ತ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಲ್ಯಾಪ್ರೋಸ್ಕೋಪಿ ಉಪಕರಣ ದೊರೆಯಲಿದೆ. ಉದರದಲ್ಲಿ ಸಣ್ಣ ಛೇದದ ಮೂಲಕ ಶಸ್ತ್ರ ಚಿಕಿತ್ಸೆ ಮಾಡಬಹುದು ಎಂದು ಸರ್ಕಾರದ ಆರೋಗ್ಯ ಯೋಜನೆಗಳನ್ನು ವಿವರಿಸಿದರು.
ಯಿಮ್ಸ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ಶಿವಕುಮಾರ ಮಾತನಾಡಿ, ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ಹೊಸ ಕಾಯಕಲ್ಪ ನೀಡುವ ಸಂಕಲ್ಪ ಹೊಂದಿದ್ದೇನೆ. ಜತೆಗೆ ಪಾರದರ್ಶಕ ಆಡಳಿತ ನೀಡಿ ಜನರಿಗೆ ಅನುಕೂಲತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಡಾ. ನವಾಜ್ ಉಮರ್, ಡಿಹೆಚ್‌ಓ ಡಾ. ಮಹೇಶ ಬಿರಾದಾರ, ಡಾ. ರಿಜ್ವಾನಾ ಅಫ್ರೀನ್, ಡಾ. ಸಂತೋಷ ಲಕ್ಷ್ಮಣ ಸಹಿತ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.