ಸಂಡೂರು: ಹೋಬಳಿ ಕೇಂದ್ರವಾಗಿರುವ ಚೋರುನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ೩೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ದೊರೆತಿದ್ದು. ಚೋರುನೂರನ್ನು ಎರಡನೇ ಸಂಡೂರನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದು ಶಾಸಕ ಈ. ತುಕಾರಾಮ್ ಹೇಳಿದರು.
ಹೋಬಳಿ ಕೇಂದ್ರವಾಗಿರುವ ಚೋರುನೂರಿನಲ್ಲಿ ₹ ೧ ಕೋಟಿ ವೆಚ್ಚದಲ್ಲಿ ಸರ್ಕಿಟ್ ಹೌಸ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ₹ ೮ ಕೋಟಿ ವೆಚ್ಚದಲ್ಲಿ ಚೋರುನೂರು-ಜಿಗೇನಹಳ್ಳಿ-ತ್ಯಾಗದಾಳು ರಸ್ತೆ ನಿರ್ಮಿಸಲಾಗುವುದು. ₹೨ ಕೋಟಿ ವೆಚ್ಚದಲ್ಲಿ ಶಾಲೆ ಅಭಿವೃದ್ಧಿ ಪಡಿಸಲಾಗುವುದು. ಕೆರೆ ಒತ್ತುವರಿಯಿಂದ ಅತಂತ್ರವಾಗಿರುವ ೨೫ ಕುಟುಂಬಗಳಿಗೆ ಡಿಎಂಎಫ್ ಅನುದಾನದಲ್ಲಿ ಬೇರೆಡೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.
ತಾಪಂ ಇಒ ಎಚ್.ಷಡಕ್ಷರಯ್ಯ ಪಂಚ ಗ್ಯಾರಂಟಿಗಳ ಅನುಷ್ಠಾನ ಕುರಿತು ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ಅಡಿ ನೋಂದಣಿಯಾದ ೪೫೮೨೫ ಜನರಿಗೆ ತಲಾ ₹೨೦೦೦ ದಂತೆ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಉಳಿದವರಲ್ಲಿ ಕೆಲವರು ಮೃತಪಟ್ಟಿದ್ದರೆ, ಕೆಲವರದ್ದು ಇ ಕೆವೈಸಿ ಸಮಸ್ಯೆ ಇದೆ. ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗವುದು. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ೯೭.೮೫ ರಷ್ಟು ಪ್ರಗತಿಯಾಗಿದ್ದು, ಈವರೆಗೆ ₹೧೦.೮೮ ಕೋಟಿ ವೆಚ್ಚವಾಗಿದೆ ಎಂದರು.ಅನ್ನಭಾಗ್ಯ ಯೋಜನೆ ಅಡಿಯಲ್ಲಿ ೪೯೩೩೫ ಕುಟುಂಬಗಳಿಗೆ ಪ್ರತಿ ತಿಂಗಳು ೩.೮೬ ಕೋಟಿಯಂತೆ ಡಿಸೆಂಬರ್‌ವರೆಗೆ ₹೧೫.೬೫ ಕೋಟಿ ಹಣ ಪಡಿತರ ಚೀಟಿದಾರರ ಖಾತೆಗೆ ಜಮೆ ಮಾಡಲಾಗಿದೆ. ಯುವ ನಿಧಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ೪೬೭ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ ೩೦.೨೦ ಲಕ್ಷ ಮಹಿಳೆಯರು ಸಂಚಾರ ಮಾಡಿದ್ದು, ಇದರಿಂದ ₹ ೧೧.೧೪ ಕೋಟಿ ಜನತೆಗೆ ಉಳಿತಾಯವಾಗಿದೆ ಎಂದರು.
ತಹಸೀಲ್ದಾರ್ ಜಿ.ಅನಿಲ್‌ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಒಟ್ಟು ೩೦ ಅರ್ಜಿಗಳು ಸಲ್ಲಿಕೆಯಾಗಿವೆ. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ ಜೋಗತಿ, ಉಪಾಧ್ಯಕ್ಷೆ ಗೀತಾ, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್.ಅಕ್ಕಿ, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ, ಹನುಮಂತಪ್ಪ, ಜಯರಾಂ, ಶಿವಣ್ಣ, ರಾಘವೇಂದ್ರ ಹಾಗೂ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.