ಮಂಡ್ಯದಲ್ಲಿ ತ್ರೀ-ಡಿ ಮಾದರಿಯಲ್ಲಿ ಸಂವಿಧಾನ ಭವನ ನಿರ್ಮಾಣಕ್ಕೆ ಒಪ್ಪಿಗೆ

KannadaprabhaNewsNetwork |  
Published : Jul 03, 2026, 01:30 AM IST
೨ಕೆಎಂಎನ್‌ಡಿ-೪ಮಂಡ್ಯದಲ್ಲಿ ತಲೆಎತ್ತಲಿರುವ ಸಂವಿಧಾನ ಭವನದ ತ್ರೀ-ಡಿ ಚಿತ್ರ. | Kannada Prabha

ಸಾರಾಂಶ

ಸಂವಿಧಾನದ ಹಕ್ಕು-ಬಾಧ್ಯತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ವಕೀಲರ ಸಂಘ ವಿನೂತನ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂವಿಧಾನ ಭವನದ ತ್ರೀ-ಡಿ ಮಾದರಿ ಇದೀಗ ಸರ್ಕಾರದಿಂದ ಅಂತಿಮಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನದ ಹಕ್ಕು-ಬಾಧ್ಯತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ವಕೀಲರ ಸಂಘ ವಿನೂತನ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂವಿಧಾನ ಭವನದ ತ್ರೀ-ಡಿ ಮಾದರಿ ಇದೀಗ ಸರ್ಕಾರದಿಂದ ಅಂತಿಮಗೊಂಡಿದೆ.

ಭಾರತದ ಮೊಟ್ಟ ಮೊದಲ ಸಂವಿಧಾನ ಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಭವ್ಯ ಭವನಕ್ಕೆ ೭ ಕೋಟಿ ರು. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅಂದಾಜುಪಟ್ಟಿ ತಯಾರಿಸಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ೩ ಕೋಟಿ ರು. ಹಣವನ್ನು ಬಿಡುಗಡೆ ಮಾಡಿದೆ.

ನಾಲ್ಕು ಮಹಡಿಗಳನ್ನು ಹೊಂದಿರುವ ಸಂವಿಧಾನ ಭವನದ ನೆಲ ಮಹಡಿಯಲ್ಲಿ ಪಾರ್ಕಿಂಗ್, ಮೊದಲ ಮಹಡಿಯಲ್ಲಿ ರಿಸೆಪ್ಷನ್, ಸಂವಿಧಾನದ ಗ್ಯಾಲರಿ ಇರಲಿದೆ. ಅದರಲ್ಲಿ ಕಾನೂನು ಪುಸ್ತಕ, ಸಂವಿಧಾನ ರಚನೆಗೆ ಸಂಬಂಧಿಸಿದ ಕನ್ನಡ, ಆಂಗ್ಲ ಪುಸ್ತಕಗಳಿರಲಿವೆ. ಎರಡನೇ ಮಹಡಿಯಲ್ಲಿ ನೂರು ಮಂದಿ ಸಾಮರ್ಥ್ಯದ ಸಭಾಂಗಣ ಹಾಗೂ ಮೂರನೇ ಮಹಡಿಯಲ್ಲಿ ಕ್ಯಾಂಟೀನ್ ಸೌಲಭ್ಯವಿರಲಿದೆ. ಪುಸ್ತಕದ ಮಾದರಿಯಲ್ಲಿ ಕಟ್ಟಡದ ವಿನ್ಯಾಸವನ್ನು ರೂಪಿಸಲಾಗಿದೆ.

ಜಿಲ್ಲಾ ವಕೀಲರ ಸಂಘದ ಕಟ್ಟಡದ ಪಕ್ಕದಲ್ಲೇ ಇರುವ ನಾಲ್ಕು ಗುಂಟೆ ಜಾಗವನ್ನು ಸಂವಿಧಾನ ಭವನಕ್ಕೆ ಕಾಯ್ದಿರಿಸಲಾಗಿದೆ. ಕಳೆದ ೨೦೨೫ರ ನವೆಂಬರ್‌ನಲ್ಲೇ ಜಿಲ್ಲಾ ವಕೀಲರ ಸಂಘ ಸಮಾಜ ಕಲ್ಯಾಣ ಸಚಿವರ ಮೂಲಕ ಲೋಕೋಪಯೋಗಿ ಇಲಾಖೆ ಮತ್ತು ಮುಖ್ಯಮಂತ್ರಿಗಳಿಗೆ ೫ ಕೋಟಿ ರು. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಸರ್ಕಾರ ಅದಕ್ಕೆ ಅನುಮೋದನೆ ನೀಡಿದ ನಂತರದಲ್ಲಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ೩ ಕೋಟಿ ರು. ಹಣವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಿ ಮುಖ್ಯ ಇಂಜಿನಿಯರ್‌ಗೆ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು.

ಇದೀಗ ಲೋಕೋಪಯೋಗಿ ಇಲಾಖೆ ಸಂವಿಧಾನ ಭವನದ ತ್ರೀ-ಡಿ ಚಿತ್ರವನ್ನು ಅಂತಿಮಗೊಳಿಸಿದೆ. ಸರ್ಕಾರವೂ ಅದನ್ನು ಒಪ್ಪಿರುವುದರಿಂದ ಕಾಮಗಾರಿ ಶೀಘ್ರವೇ ಪ್ರಾರಂಭವಾಗಬಹುದೆಂಬ ನಿರೀಕ್ಷೆ ಮೂಡಿದೆ.ಸಂವಿಧಾನ ಭವನಕ್ಕೆ ೩ ಕೋಟಿ ರು. ಹಣ ಬಿಡುಗಡೆಯಾಗಿದೆ. ಮುಂದಿನ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿ ಇನ್ನೊಂದು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಸಂವಿಧಾನ ಆಶಯಗಳನ್ನು ಜನರಿಗೆ ತಿಳಿಸುವುದು ಇದರ ಮೂಲ ಉದ್ದೇಶ. ಸಂವಿಧಾನದ ಪುಸ್ತಕ ಮಾದರಿಯಲ್ಲಿ ತಲೆಎತ್ತಲಿರುವ ಭವನ ಭಾರತದಲ್ಲೇ ಮೊದಲ ಸಂವಿಧಾನ ಭವನ ಎಂಬ ಹಿರಿಮೆಗೆ ಪಾತ್ರವಾಗಲಿದೆ.

- ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರಸಂವಿಧಾನ ಭವನ ಜಿಲ್ಲಾ ವಕೀಲರ ಸಂಘದ ಕನಸಿನ ಕೂಸು. ಅದರ ತ್ರೀ-ಡಿ ಮಾದರಿ ಇದೀಗ ಅಂತಿಮಗೊಂಡಿದೆ. ೭ ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವನಕ್ಕೆ ೩ ಕೋಟಿ ರು. ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು.

- ಟಿ.ಎಸ್.ಸತ್ಯಾನಂದ, ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣವಾದದ್ದು: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ
ರೈತರ ನೆರವಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಧಾವಿಸಲಿ: ಶಾಸಕ ಸಿಎನ್ ಬಾಲಕೃಷ್ಣ