ಕನ್ನಡಪ್ರಭ ವಾರ್ತೆ ಹಾಸನ
ಒಳಿತನ್ನು ನಾವು ಎಲ್ಲಾ ಕಡೆಗಳಿಂದಲೂ ಸ್ವೀಕರಿಸಬೇಕು. ಮನೆಗೊಂದು ಗ್ರಂಥಾಲಯ ಅನುಷ್ಠಾನವು ಬಹು ಆಯಾಮದ ಕಾರ್ಯಕ್ರಮವಾಗಿದೆ. ಪುಸ್ತಕ ಪ್ರಾಧಿಕಾರದ ಕಟ್ಟಡದ ಹೊರಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗ್ರಂಥಾಲಯದ ಮೂಲಕ ಜ್ಞಾನದ ಹಣತೆಯನ್ನು ಹಚ್ಚಲು ಹೊರಟಿದ್ದೇವೆ ಎಂದು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸರವರು ಹೇಳಿದರು.ನಗರದ ಉದಯಗಿರಿಯ ಕೆಂಪೇಗೌಡ ರಸ್ತೆಯಲ್ಲಿರುವ ನಿವೃತ್ತ ಪ್ರಾಂಶುಪಾಲ ಎ.ಎಚ್. ಗಣೇಶ್ ಅಂಕಪುರರವರ ನಿವಾಸದಲ್ಲಿ ಗ್ರಂಥಾಲಯ ಉದ್ಘಾಟಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಆಹ್ವಾನಿತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಕಾರ್ಯಕ್ರಮವಾಗಿದ್ದು, ಬಹಳ ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಏರ್ಪಾಡಾಗಿರುವುದು ಕಾರ್ಯಕ್ರಮ ಅನುಷ್ಠಾನಕ್ಕೆ ಸಿಕ್ಕ ಮೊದಲ ಯಶಸ್ಸು ಎಂದರು. ನಾವು ಮನೆ ಕಟ್ಟುವಾಗ, ವಾಸಿಸುವಾಗ ಅಲ್ಲೊಂದು ಪೂಜಾ ಮನೆಯಿರಬೇಕು, ಮಲಗುವ, ಕೂರುವ, ನಿಲ್ಲುವ ಜಾಗಗಳಿರಬೇಕು. ಅವುಗಳ ತುಂಬಾ ವಿವಿಧ ಪೀಠೋಪಕರಣಗಳಿರಬೇಕು. ಅದಕ್ಕೆ ಭೂಷಣವಾಗಿ ಲಕ್ಷಾಂತರ ರು.ಗಳ ಟಿವಿ, ಹೋಂ ಥಿಯೇಟರ್ ಮತ್ತಿತರ ಐಷಾರಾಮಿ ಅಲಂಕಾರಿಕ ವಸ್ತುಗಳಿರಬೇಕು. ಆಗ ನಮ್ಮ ಮನೆಯ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದು ಹಂಬಲಿಸುತ್ತೇವೆ. ನಿಜ, ಅದು ತಪ್ಪಲ್ಲ. ಆದರೆ ಅದಷ್ಟೂ ನಮ್ಮ ಸಂಸ್ಕೃತಿಯಲ್ಲ. ಅದರಿಂದ ನಮಗೆ ನೆಮ್ಮದಿ ಸಿಗುವುದಿಲ್ಲ. ಅದೆಲ್ಲಾ ಸಿಗಬೇಕೆಂದರೆ ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಗ್ರಂಥಾಲಯವೆಂದರೆ ಅದೊಂದು ಕೇವಲ ಪುಸ್ತಕಗಳ ಸರಕಲ್ಲ. ನಮ್ಮ ದೇಹದೊಳಗಣ ಆತ್ಮದಂತೆ ನಮ್ಮ ಮನೆಯೆಂಬ ದೇವಾಲಯದ ಜ್ಞಾನ ಸಂಸ್ಕೃತಿಯ ಕಳಶ ಎಂದರು.
ಉತ್ತಮ ಓದುಗರನ್ನು ಗುರುತಿಸಿ, ವರ್ಷದಲ್ಲಿ ನಾಲ್ಕು ರೀತಿಯ ಪ್ರಶಸ್ತಿಗಳನ್ನು ಪ್ರಾಧಿಕಾರದ ವತಿಯಿಂದ ನೀಡುವ ಮೂಲಕ ಓದುಗರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದರು.ಶಿಕ್ಷಕರು ಮತ್ತು ಸಾಹಿತಿಗಳಾದ ಕೆ.ಎನ್. ಚಿದಾನಂದರವರು, ನಾ ಮೆಚ್ಚಿದ ಪುಸ್ತಕ ಮತ್ತು ನನ್ನ ಓದಿನ ಪುಸ್ತಕ ಎಂಬ ಪರಿಕಲ್ಪನೆಯಲ್ಲಿ ಎಸ್. ಲಲಿತ ರವರ ಮನದ ಕಣಿವೆಯಿಂದ ಎಂಬ ಪುಸ್ತಕವನ್ನು ಪರಿಚಯಿಸಿದರು. ಈ ಪುಸ್ತಕದಲ್ಲಿ ಒಟ್ಟು ಅರವತ್ನಾಲ್ಕು ಲೇಖನಗಳಿದ್ದು, ಎಲ್ಲಾ ಲೇಖನಗಳು ಓದುಗರಿಗೆ ಆಸಕ್ತಿಯನ್ನು ಬೆಳೆಸುತ್ತವೆ. ಮೂಲತಃ ಸಕಲೇಶಪುರದವರಾದ ಸಾಹಿತಿ ಲಲಿತಾರವರಿಗೆ ಮಲೆನಾಡಿನ ಹಸಿರು, ನಿತ್ಯ ನಿರಂತರದ ಮಳೆ, ಮರ- ಗಿಡ, ಬಳ್ಳಿ, ಹಕ್ಕಿಗಳು, ಬೆಳಗು ಮತ್ತು ಸಂಜೆ ಮುಂತಾದವು ಸ್ಫೂರ್ತಿ ನೀಡಿವೆ. ವರ್ಷವೊಂದರಲ್ಲಿ ಬರುವ ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ ಋತುಗಳಲ್ಲಿ ಮತ್ತು ದ್ವಾದಶ ಮಾಸಗಳಲ್ಲಿ ಬೀಳುವ ಮಳೆಯ ಹನಿಗಳು ಸಾಹಿತಿಗೆ ಪೇರಣೆ ನೀಡಿವೆ. ಆಯಾ ಮಾಸಗಳಲ್ಲಿ ಬರುವ ಸಾಂದರ್ಭಿಕ ಹಬ್ಬ ಹರಿದಿನಗಳ ಆಚರಣೆಗಳನ್ನು ಅರ್ಥವತ್ತಾಗಿ ಓದುಗರಿಗೆ ಕಟ್ಟಿ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಈ ಪುಸ್ತಕವನ್ನು ಒಮ್ಮೆ ಓದಲೇಬೇಕೆಂಬ ಕುತೂಹಲ ಮೂಡಿಸಿದರು.ಕಾರ್ಯಕ್ರಮದ ಅತಿಥಿಗಳಾದ ಎ.ಎಚ್. ಗಣೇಶ್ ದಂಪತಿಯನ್ನು ಪ್ರಾಧಿಕಾರವು ಸನ್ಮಾನಿಸಿ ಗೌರವಿಸಿತು.
ನಂತರ ಮಾತನಾಡಿದ ಎ.ಎಚ್. ಗಣೇಶ್ ರವರು, ಜ್ಞಾನದ ಸಂಕೇತವೆನಿಸಿದ ಮನೆಗೊಂದು ಗ್ರಂಥಾಲಯದ ಅನುಷ್ಠಾನವು ತಮ್ಮ ಮನೆಯಿಂದ ಪ್ರಾರಂಭವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲೂ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭ ಹಾರೈಸಿ ಪ್ರಾಧಿಕಾರಕ್ಕೆ ವಂದಿಸಿದರು. ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರಾದ ಗೊರೂರು ಅನಂತರಾಜುರವರು, ಸರ್ವರನ್ನು ಪರಿಚಯಿಸುತ್ತ ಪುಸ್ತಕಗಳು ಜ್ಞಾನವಾಹಿನಿಯಾಗಿ ಕಾರ್ಯ ನಿರ್ವಹಿಸುತ್ತವೆ. ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗುವಂತೆ ಮಾಡುವುದೇ ನಮ್ಮ ಜಾಗೃತ ಸಮಿತಿಯ ಉದ್ದೇಶವಾಗಿದೆ ಎಂದರು.
ಶ್ರೀಕಂಠುರವರು ಪ್ರಾರ್ಥಿಸಿದರೆ, ಶಶಿಕಲಾ ಜಗದೀಶ್ ರವರು ನಿರೂಪಿಸಿದರು. ಸೀಮಾ ಮುರಳೀಧರ್ ರವರು ಎಲ್ಲರನ್ನು ಸ್ವಾಗತಿಸಿದರು. ಡಾ. ಕುಶಾಲ್ ಬರಗೂರು, ಸತ್ಯವತಿ ಅಧ್ಯಕ್ಷರು ಮಾನವ ಹಕ್ಕುಗಳ ಒಕ್ಕೂಟ ಹಾಸನ ಜಿಲ್ಲೆ, ಶಿಕ್ಷಕ ಸಾಹಿತಿ ಕೆ.ಎನ್. ಚಿದಾನಂದ, ಯದುರಾಜ್, ರಾಜ್ ಕುಮಾರ್ ಅಂಕಪುರ, ಡಾ. ಸೀಮಾ ಮುರಳೀಧರ, ಶೋಭಾಗಣೇಶ್ ಮುಂತಾದವರು ಉಪಸ್ಥಿತರಿದ್ದರು.