ವೈದ್ಯನಾಥಪುರ ಡೇರಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಪ್ಪು ಪಿ.ಗೌಡ, ವಿ.ಕೆ.ನಾಣಯ್ಯ ಆಯ್ಕೆ: ತಲೆಕೆಳಗಾದ ಕಾಂಗ್ರೆಸ್ ಲೆಕ್ಕಾಚಾರ

KannadaprabhaNewsNetwork | Published : Jan 17, 2025 12:47 AM

ಸಾರಾಂಶ

ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ವಿವಾದ ಉಂಟಾಗಿದ್ದ ಕಾರಣ ನಿರ್ದೇಶಕರ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣೆ ಮುಂದೂಡಿದ ಕ್ರಮ ಪ್ರಶ್ನಿಸಿ ಜೆಡಿಎಸ್ ನ ವಿ.ಆರ್.ಸಿದ್ದಪ್ಪ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಹೈಕೋರ್ಟ್ ಆದೇಶದ ನಡುವೆಯೂ ಸಹ ಚುನಾವಣಾಧಿಕಾರಿಗಳ ಅನಾರೋಗ್ಯದ ನೆಪವೊಡ್ಡಿ ಮುಂದೂಡಲಾಗಿದ್ದ ತಾಲೂಕಿನ ವೈದ್ಯನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆದು ನೂತನ ಅಧ್ಯಕ್ಷರಾಗಿ ಅಪ್ಪು ಪಿ.ಗೌಡ, ಉಪಾಧ್ಯಕ್ಷರಾಗಿ ವಿ.ಕೆ.ನಾಣಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಪ್ಪು ಪಿ.ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ವಿ.ಕೆ. ನಾಣಯ್ಯ ಹೊರತುಪಡಿಸಿ, ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ಹಿರಿಯ ನಿರೀಕ್ಷಕ ಜೆ. ಸಂತೋಷ್ ಕುಮಾರ್ ಅಂತಿಮವಾಗಿ ಘೋಷಣೆ ಮಾಡಿದರು.

ತೀವ್ರ ಕುತೂಹಲ ಕೆರಳಿಸಿದ್ದ ವೈದ್ಯನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳನ್ನು ಕಾಂಗ್ರೆಸ್ ವಶ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುವ ಮುನ್ನ ನಡೆದ ಸರ್ವ ಸದಸ್ಯರ ಸಭೆಯಲ್ಲಿ 275 ಶೇರುದಾರ ಸದಸ್ಯರ ಪೈಕಿ ಕೇವಲ 76 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ವಿವಾದ ಉಂಟಾಗಿದ್ದ ಕಾರಣ ನಿರ್ದೇಶಕರ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣೆ ಮುಂದೂಡಿದ ಕ್ರಮ ಪ್ರಶ್ನಿಸಿ ಜೆಡಿಎಸ್ ನ ವಿ.ಆರ್.ಸಿದ್ದಪ್ಪ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.

ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದ ಅವರು ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಉಪನಿಬಂಧಕಿ ರೇಖಾ ಹಾಗೂ ಚುನಾವಣೆಗೆ ಸೂಕ್ತ ಪೊಲೀಸ್ ಬಂದೋಬಸ್ತು ನೀಡುವಂತೆ ಜಿಲ್ಲಾ ಎಸ್ಪಿಗೆ ಆದೇಶ ಹೊರಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ನಾಯಕರ ಕುತಂತ್ರಕ್ಕೆ ಬಲಿಯಾಗಿದ್ದ ಸಹಕಾರ ಸಂಘಗಳ ಜಿಲ್ಲಾ ನಿಬಂಧಕರು ಚುನಾವಣಾ ಅಧಿಕಾರಿಗಳ ಅನಾರೋಗ್ಯದ ನೆಪವೊಡ್ಡಿ ಜನವರಿ 7ರಂದು ನಿಗದಿಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಮುಂದೂಡಿದ್ದರು.

ಚುನಾವಣೆ ಮುಂದೂಡಿದ್ದರ ಕ್ರಮ ಪ್ರಶ್ನಿಸಿ ಜೆಡಿಎಸ್ ಬೆಂಬಲಿತರು ಮತ್ತೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಅರಿತ ಸಹಕಾರ ಸಂಘಗಳ ಉಪನಿಬಂಧಕರು ಗುರುವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವ ಮೂಲಕ ನ್ಯಾಯಾಲಯದ ನಿಂದನೆ ಆರೋಪದಿಂದ ಪಾರಾಗಿದ್ದಾರೆ.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪುರಸಭಾ ಸದಸ್ಯೆ ಪ್ರಿಯಾಂಕ, ಸಂಘದ ನಿರ್ದೇಶಕರಾದ ವಿ.ಎನ್.ಕೃಷ್ಣ , ವಿ.ಎ. ನಾರಾಯಣ, ಶಂಕರ್, ಸಿದ್ದಪ್ಪ, ರತ್ನಮ್ಮ, ವಿಶಾಲಾಕ್ಷಿ, ಸಂಘದ ಸಿಇಒ ನಿಶ್ಚಿತ ಹಾಗೂ ಗ್ರಾಮದ ಮುಖಂಡರು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

Share this article