ಕನ್ನಡಪ್ರಭ ವಾರ್ತೆ ಹಾಸನ೨೦೧೯ರ ಫೆಬ್ರವರಿ ೧೪ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಪುಲ್ವಾಮಾ ಉಗ್ರ ದಾಳಿಯಲ್ಲಿ ೪೪ ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, ಸ್ಮರಣಾರ್ಥವಾಗಿ ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಮಡಿದ ಯೋಧರಿಗೆ ಶನಿವಾರ ಭಾವಪೂರ್ಣ ನಮನ ಸಲ್ಲಿಸಲಾಯಿತು.ಈ ಹಿನ್ನೆಲೆಯಲ್ಲಿ ಎಲೈಟ್ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ವಿಶೇಷ ಶ್ರದ್ಧಾಂಜಲಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಶಹೀದ್ ಯೋಧರ ಭಾವಚಿತ್ರಗಳಿಗೆ ಫಲಪುಷ್ಪ ಅರ್ಪಿಸಿ ಎರಡು ನಿಮಿಷ ಮೌನಾಚರಣೆ ನಡೆಸಿದರು. ದೇಶಭಕ್ತಿ ಗೀತೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಶಹೀದ್ ಯೋಧರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಾಗರಾಜು ಮಾತನಾಡಿ, ದೇಶದ ಗಡಿಯನ್ನು ಕಾವಲು ಕಾಯುವ ಸೈನಿಕರು ನಮ್ಮ ನಿಜವಾದ ಹೀರೋಗಳು. ಅವರ ತ್ಯಾಗದ ಫಲವಾಗಿ ನಾವು ಇಂದು ಶಾಂತಿಯುತವಾಗಿ ಬದುಕುತ್ತಿದ್ದೇವೆ. ದೇಶದ ಭದ್ರತೆ ಕೇವಲ ಸೈನಿಕರ ಜವಾಬ್ದಾರಿ ಮಾತ್ರವಲ್ಲ; ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ದೇಶ ಅಭಿವೃದ್ಧಿ ಸಾಧಿಸುತ್ತದೆ ಎಂದು ಹೇಳಿದರು. ಫೆಬ್ರವರಿ ೧೪ನ್ನು ಕೇವಲ ಪ್ರೇಮಿಗಳ ದಿನವೆಂದು ಆಚರಿಸುವುದಕ್ಕೆ ಬದಲಾಗಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ದಿನವನ್ನಾಗಿ ರೂಪಿಸಬೇಕು. ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲೇ ದೇಶಭಕ್ತಿ, ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಹಾಗೂ ರಾಷ್ಟ್ರಭಿಮಾನವನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಗಳ ಮುಖ್ಯ ಉದ್ದೇಶವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಕೂಡ ತಮ್ಮ ಭಾವನೆಗಳನ್ನು ಹಂಚಿಕೊಂಡು, ನಾವು ಪ್ರತಿದಿನವೂ ಸೈನಿಕರ ಜೊತೆ ಇದ್ದೇವೆ. ದೇಶಕ್ಕಾಗಿ ಅಗತ್ಯವಿದ್ದರೆ ನಾವು ಕೂಡ ಸೇವೆಗೆ ಸಿದ್ಧರಾಗಿದ್ದೇವೆ ಎಂಬ ಸಂದೇಶ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ದೇಶಭಕ್ತಿ ಘೋಷಣೆಗಳು ಮೊಳಗಿದವು.ಈ ಶ್ರದ್ಧಾಂಜಲಿ ಕಾರ್ಯಕ್ರಮದ ಮೂಲಕ ದೇಶದ ರಕ್ಷಣೆಗೆ ತಮ್ಮ ಜೀವವನ್ನೇ ಅರ್ಪಿಸಿದ ಎಲ್ಲಾ ಯೋಧರಿಗೆ ಗೌರವ ಸೂಚಿಸಿ, ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಂಕಲ್ಪ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳು ಪುಲ್ವಾಮಾ ದಾಳಿಯ ಹಿನ್ನೆಲೆ ಮತ್ತು ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರೆ, ೯ನೇ ತರಗತಿಯ ವಿದ್ಯಾರ್ಥಿಗಳು ಭಾರತೀಯ ಸೇನೆಯ ಶೌರ್ಯ, ಶಿಸ್ತು ಹಾಗೂ ಸೇವಾಭಾವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಹಂಚಿಕೊಂಡು, ದೇಶಕ್ಕಾಗಿ ಅಗತ್ಯವಿದ್ದರೆ ಸೇವೆಗೆ ಸಿದ್ಧರಾಗಿರುವೆವು ಎಂಬ ಸಂದೇಶ ನೀಡಿದರು.ಇದೇ ವೇಳೆ ಶಾಲೆಯ ಮುಖ್ಯೋಪಾಧ್ಯಯರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು.