ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಾವೇರಿಯಲ್ಲಿ ಮಾಡುತ್ತಿರುವುದು ಸಾಧನಾ ಸಮಾವೇಶವಲ್ಲ, ಬದಲಾಗಿ ಅದು ಯಾತನಾ ಸಮಾವೇಶ ಎಂದು ಸಂಸದ ಬಿ. ವೈ. ರಾಘವೇಂದ್ರ ಲೇವಡಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವು ಆರ್ಥಿಕ ದಿವಾಳಿತನ ಎದುರಿಸುತ್ತಿದೆ. ಖಜಾನೆ ಖಾಲಿಯಾಗಿದ್ದರೂ ದೊಡ್ಡ ದೊಡ್ಡ ಮಾತನಾಡುತ್ತಿರುವ ಕಾಂಗ್ರೆಸ್ ಸರ್ಕಾರ, ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನರು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕುರ್ಚಿಗಾಗಿ ದೊಡ್ಡ ಕಚ್ಚಾಟವೇ ನಡೆಯುತ್ತಿದ್ದು, ಇದರ ಹೊರತಾದ ಯಾವುದೇ ಕಾರ್ಯಕ್ರಮ ಈ ಸರ್ಕಾರದಿಂದ ಇಲ್ಲವಾಗಿದೆ ಎಂದು ಟೀಕಿಸಿದರು.ಈ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಗುತ್ತಿಗೆದಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಶೇ.60 ರಷ್ಟು ಯುವಕರಿಗೆ ಸ್ಟೈಫಂಡ್ ದೊರೆಯುತ್ತಿಲ್ಲ. ರೈತರ ಆತ್ಮಹತ್ಯೆ ಜಾಸ್ತಿಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೈಲುಗಳು ರೆಸಾರ್ಟ್‌ಗಳಾಗಿ ಪರಿವರ್ತನೆಯಾಗಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಪೊಲೀಸ್ ವಶದಲ್ಲಿದ್ದ ಮಹಿಳೆಯನ್ನೇ ವಿವಸ್ತ್ರಗೊಳಿಸಿದ ಘಟನೆ ಹಾಗೂ ಓಂಶಕ್ತಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ದೂರಿದರು.
ಹಗರಣಗಳ ಸರಮಾಲೆಯೇ ಇದೆ. ಖಜಾನೆ ಲೂಟಿ ಇವರ ದೊಡ್ಡ ಅಭಿಯಾನವಾಗಿದ್ದು, ವಾಲ್ಮೀಕಿ ಹಗರಣ, ಮುಡಾ ಹಗರಣ, ಅಬಕಾರಿ ಹಗರಣ ಸೇರಿದಂತೆ ಇದು ಹಗರಣಗಳ ಸರ್ಕಾರವಾಗಿದೆ. ಗೃಹಲಕ್ಷ್ಮೀ ಯೋಜನೆಯೆಂಬುದು ಚಕ್ಕುಲಿಯ ಒಳಭಾಗ ತಿಂದು ಹೊರ ಭಾಗದ ಲೆಕ್ಕ ನೀಡುವ ಯೋಜನೆಯಾಗಿದೆ. ವಿಧಾನಸಭೆಯಲ್ಲಿ ಕೇಳಿದ ಗೃಹಲಕ್ಷ್ಮೀ ಯೋಜನೆಯ 5,500 ಕೋಟಿ ಹಣಕ್ಕೆ ಇನ್ನೂ ಲೆಕ್ಕ ನೀಡಿಲ್ಲ. ಕ್ಷಮೆಯನ್ನೂ ಕೇಳಿಲ್ಲ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ 4800 ಕೋಟಿ ಬಾಕಿ ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶದ 1200 ಬಸ್ ಮಾರ್ಗಗಳನ್ನು ನಿಲ್ಲಿಸಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಕೊಟ್ಟಿದ್ದಾರೆ. ಆದರೆ ಈ ಕೈಯಲ್ಲಿ ಕೊಟ್ಟು ಆ ಕೈಯಲ್ಲಿ ಕಿತ್ತುಕೊಳ್ಳುವ ಹಾಗೆ ಮಾಡಿ ವಾಣಿಜ್ಯ ಮತ್ತು ಕೈಗಾರಿಕೆ ಗ್ರಾಹಕರಿಗೆ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದ ಕೈಗಾರಿಕೆಗಳ ಅವಸಾನಕ್ಕೆ ಕಾರಣವಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೂ ಇಲ್ಲ, ಅದರ ಬದಲಿಗೆ ಕೊಡುತ್ತಿದ್ದ 120 ರು.ಗಳೂ ಇಲ್ಲ. ಜನವರಿಯಿಂದ 657 ಕೋಟಿ ರು. ಅನ್ನಭಾಗ್ಯದ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಶೇ.35ರಷ್ಟು ಹಣ ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದು, ದಲಿತರ ಉದ್ಧಾರಕ್ಕೆ ಇಟ್ಟ ಹಣಕ್ಕೆ ಕನ್ನ ಹಾಕಲಾಗಿದೆ ಎಂದರು.
ವಿಶೇಷ ಎಂದರೆ 300 ರೈತರು ಆತ್ಮಹತ್ಯೆ ಮಾಡಿಕೊಂಡ ಹಾವೇರಿಯಲ್ಲಿಯೇ ಈ ಸಮಾವೇಶ ಮಾಡಲು ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದಿಂದ ನೀಡುತ್ತಿದ್ದ 4000 ರು.ಗಳನ್ನು ಕಿತ್ತುಕೊಂಡಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿಯನ್ನು ನಿಲ್ಲಿಸಿದ್ದು, ಗುತ್ತಿಗೆದಾರರಿಗೆ 37 ಸಾವಿರ ಕೋಟಿ ಬಾಕಿ ನಿಲ್ಲಿಸಿದೆ. 20 ಸಾವಿರ ಕೋಟಿ ಆದಾಯ ಕೊರತೆ ಎದುರಿಸುತ್ತಿದೆ ಎಂದು ಸಿಎಜಿ ವರದಿ ಹೇಳಿದೆ. ಬಾರ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ಕುಡುಕರ ರಾಜ್ಯವನ್ನಾಗಿ ಮಾಡಿದೆ. ಇಷ್ಟೆಲ್ಲಾ ಅಪಸವ್ಯಗಳು ಇರುವಾಗ ಸರ್ಕಾರ ಯಾವ ಮುಖ ಹೊತ್ತು ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಪ್ರಶ್ನಿಸಿದರು.ಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್, ಮೋಹನ್‌ರೆಡ್ಡಿ, ಮೇಘರಾಜ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ರಾಜುತಲ್ಲೂರು, ಮಂಜುನಾಥ್ ಮತ್ತಿತರರಿದ್ದರು.