ಅನೈತಿಕತೆಯ ತಾಣವಾಗಿರುವ ಅರಸೀಕೆರೆಯ ನಗರಸಭೆಯ ಸಮುದಾಯ ಭವನ

KannadaprabhaNewsNetwork |  
Published : May 01, 2024, 01:22 AM IST
ನಗರಸಭಾ ಸಮುದಾಯ ಭವನ ತನ್ನ ಗತವೈಭವವನ್ನು ಕಳೆದುಕೊಂಡು ಅವನತಿಯತ್ತ ಸಾಗಿ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿರುವುದು ದುರ್ದೈವದ ಸಂಗತಿ. | Kannada Prabha

ಸಾರಾಂಶ

ಅರಸೀಕೆರೆಯ ನಗರಸಭಾ ಸಮುದಾಯ ಭವನವನ್ನು ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿ ೨೦ ವರ್ಷ ಕಳೆದರೂ ಸಾರ್ವಜನಿಕರ ಸೇವೆಗೆ ಲಭ್ಯವಾಗದೆ ತನ್ನ ಗತವೈಭವವನ್ನು ಕಳೆದುಕೊಂಡು ಅವನತಿಯತ್ತ ಸಾಗಿದೆ.

ಗತವೈಭವ ಕಳೆದುಕೊಂಡಿರುವ ನಗರಸಭಾ ಕಟ್ಟಡ । ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ

ಪಿ.ಶಾಂತಕುಮಾರ್

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಾರ್ವಜನಿಕರ ಅನುಕೂಲಕ್ಕಾಗಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಲ್ಲಿ ನಿರ್ಮಿಸಲಾಗಿರುವ ನಗರದ ನಗರಸಭಾ ಸಮುದಾಯ ಭವನವನ್ನು ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಿಸಿ ೨೦ ವರ್ಷ ಕಳೆದರೂ ಸಾರ್ವಜನಿಕರ ಸೇವೆಗೆ ಲಭ್ಯವಾಗದೆ ತನ್ನ ಗತವೈಭವವನ್ನು ಕಳೆದುಕೊಂಡು ಅವನತಿಯತ್ತ ಸಾಗಿ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿರುವುದು ದುರ್ದೈವದ ಸಂಗತಿ.

ಸರ್ಕಾರದಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಉನ್ನತ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶುಭ ಸಮಾರಂಭಗಳು ನಡೆಯಬೇಕಾಗಿದ್ದ ನಗರಸಭೆಯ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡು ಎರಡು ದಶಕ ಕಳೆದರೂ ಸೇವೆಗೆ ಲಭ್ಯವಿಲ್ಲ. ಪೂರ್ವಾಪರ ಚಿಂತನೆಯಿಲ್ಲದ ಸರ್ಕಾರ ಅವೈಜ್ಞಾನಿಕವಾಗಿ ರೂಪಿಸುವ ಯೋಜನೆಗಳು ಯಾವ ರೀತಿ ನಿಷ್ಪ್ರಯೋಜಕವಾಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ.

ಜಿ.ವಿ.ಸಿದ್ದಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೬೫ ಲಕ್ಷ ವೆಚ್ಚದಲ್ಲಿ ಕೋರ್ಟ್ ಸಮೀಪದ ಹೈಟೆಕ್ ಸಮುದಾಯ ಭವನದ ಕಾಮಗಾರಿಯನ್ನು ನಿರ್ಮಿಸಿದೆ. ಈ ಸಮುದಾಯ ಭವನ ನಗರದ ಯಾವುದೇ ಸಮುದಾಯ ಭವನದಕ್ಕೆ ಕಡಿಮೆಯಿಲ್ಲದಂತಹ ಆಕರ್ಷಣೆ ಹೊಂದಿತ್ತು. ಈವರೆಗೆ ಉದ್ಘಾಟನೆಯ ಭಾಗ್ಯವನ್ನು ಕಾಣದೆ ಪೋಲಿ-ಪುಂಡರ ಆಟದ ವಸ್ತುವಾಗಿ ಗಾಜುಗಳು ಪುಡಿಪುಡಿಯಾಗಿ ಕಟ್ಟಡ ತನ್ನ ಕೊನೆಯ ದಿನಗಳನ್ನು ಏಣಿಸುತ್ತ ಭೂತಬಂಗಲೆಯಂತೆ ಆಗಿದೆ.

ಈ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಅಂದಿನ ಜನಪ್ರತಿನಿಧಿಗಳು ತೋರಿದ ಉತ್ಸಾಹಕತೆ ಕಾಮಗಾರಿ ಪೂರ್ಣಗೊಂಡ ನಂತರ ಭವನದ ಉಧ್ಘಾಟನೆ ನೆರವೇರಿಸುವ ಉತ್ಸಾಹ ಇಂದಿನ ಜನಪ್ರತಿನಿಧಿಗಳಲ್ಲಿ ಇಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಗುತ್ತಿದೆ. ನಾಲ್ವರು ಶಾಸಕರು ಬಂದುಹೋದರೂ ಈ ಭವ್ಯ ಕಟ್ಟಡವನ್ನು ಉದ್ಘಾಟನೆ ಮಾಡದೆ ಹಾಗೇ ಬಿಟ್ಟಿದ್ದಾರೆ.

೨೦ ವರ್ಷಗಳ ಹಿಂದೆಯೇ ಈ ಸಮುದಾಯ ಭವನದ ಕಟ್ಟಡದ ಕಾಮಗಾರಿ ಸಂಪೂರ್ಣಗೊಂಡಿದ್ದು ಇದನ್ನು ಸಾರ್ವಜನಿಕರ ಸೇವೆಗೆ ಸಮರ್ಪಣೆ ಆಗಿದ್ದರೆ ಈಗಾಗಲೇ ಬಾಡಿಗೆ ರೂಪದಲ್ಲಿ ನಗರಸಭೆಗೆ ಕೋಟ್ಯಂತರ ರು ಆದಾಯವು ಸಂದಾಯವಾಗುತ್ತಿತ್ತು. ಇಂತಹ ಸಾಮಾನ್ಯ ಪರಿಜ್ಞಾನ ಇಲ್ಲದ ಕೆಲವು ಬೇಜವಾಬ್ದಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಶುಭ ಕಾರ್ಯಗಳಿಗೆ ಸಾಕ್ಷಿಯಾಗಬೇಕಿದ್ದ ಭವ್ಯ ಸಮುದಾಯ ಭವನ ಪಾಳು ಬಿದ್ದ ಬಂಗಲೆಯಾಗಿದೆ.

ಹೈಟೆಕ್ ಸಮುದಾಯ ಭವನ:

ನಗರದ ಮದ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಬಿ.ಎಚ್.ರಸ್ತೆಗೆ ಹೊಂದಿಕೊಂಡಂತಿರುವ ಈ ಸಮುದಾಯ ಭವನ ಕೆಳ ಅಂತಸ್ತು ಸೇರಿದಂತೆ ನಾಲ್ಕು ಅಂತಸ್ತುಗಳನ್ನು ಹೊಂದಿತ್ತು. ವಿವಿಧ ಸೌಕರ್ಯಗಳಿಂದ ಕೂಡಿತ್ತು. ವಾಹನ ನಿಲುಗಡೆಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮತ್ತು ಕೆಳ ಅಂತಸ್ತಿನಲ್ಲಿ ಶೌಚಾಲಯ ಹಾಗೂ ಸ್ನಾನ ಗೃಹಗಳು ನೆಲ ಅಂತಸ್ಥಿನಲ್ಲಿ ವಿಶಾಲವಾದ ಭೋಜನಾಲಯ, ಮೊದಲ ಅಂತಸ್ಥಿನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ವ್ಯವಸ್ಥಿತ ಸಭಾಂಗಣ ಹಾಗೂ ವಧು ವರರು ತಂಗಲು ಎರಡು ಪ್ರತ್ಯೇಕ ವಿಶೇಷ ಕೊಠಡಿಗಳಿದ್ದವು. ಎರಡನೇ ಅಂತಸ್ತಿನಲ್ಲಿ ಹನ್ನೊಂದು ಕೊಠಡಿಗಳು, ಪ್ರತಿ ಕೊಠಡಿಗೂ ಹೊಂದಿಕೊಂಡಂತೆ ಶೌಚಾಲಯ ಹಾಗೂ ಸ್ನಾನಗೃಹ ಇತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ