ಅರಸೀಕೆರೆ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ

KannadaprabhaNewsNetwork | Published : Apr 14, 2025 1:19 AM

ಸಾರಾಂಶ

ಇತ್ತೀಚೆಗೆ ಸರಿಯಾದ ಸಂಸ್ಕಾರವಿಲ್ಲದೆ ಗುರುಹಿರಿಯರಲ್ಲಿ ಗೌರವ, ತಂದೆ ತಾಯಿಗಳ ಪೋಷಣೆ ಲೋಪದಿಂದ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ, ಇದೊಂದು ವಿಪರ್ಯಾಸದ ಸಂಗತಿ ಎಂದರು. ನೂತನ ಪಟ್ಟಾಧಿಕಾರಿಗಳಾದ ಶ್ರೀ ತೇಜೇಶ್ವರ ಮಹಾಸ್ವಾಮಿಗಳು ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಭಕ್ತಾದಿಗಳನ್ನು ಮಠದ ಕಡೆ ಗಮನ ಸೆಳೆದು ಸಮಾಜದಲ್ಲಿ ಸಮಾಜಮುಖಿಯಾಗಿ ಬೆಳೆಯುವ ಲಕ್ಷಣಗಳನ್ನು ಅವರಲ್ಲಿ ಕಾಣುತ್ತಿದ್ದೇವೆ ಎಂದರು. ಪೋಷಕರು ಬಿಡುವಿನ ವೇಳೆ ಮಕ್ಕಳನ್ನು ಮಠಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಿಗೆ ಕರೆತಂದು ಅವರನ್ನು ಸುಸಂಸ್ಕೃತರನ್ನಾಗಿ ಮಾಡುವ ಅಗತ್ಯವಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಮಾಜದಲ್ಲಿ ತಮ್ಮ ತಮ್ಮ ಕುಟುಂಬಗಳ ರಕ್ಷಣೆಗಾಗಿ ಅವಿರತ ದುಡಿಮೆಯಿಂದ ಕರ್ತವ್ಯ ನಿರ್ವಹಿಸುತ್ತ ಬಂದಿವೆ. ಹಾಗೆಯೇ ಮಠಮಾನ್ಯಗಳು ಕೂಡ ಸಮಾಜದ ಏಳಿಗೆಗಾಗಿ ಚಿಂತಿಸಿ ಅನೇಕ ಯೋಜನೆಗಳನ್ನು ರೂಪಿಸುತ್ತಾ ಧಾರ್ಮಿಕ, ಶೈಕ್ಷಣಿಕ, ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿಕೊಳ್ಳುತ್ತಾ ಬಂದಿವೆ. ಮಠದ ಭಕ್ತಾದಿಗಳು ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ಮಠಗಳಿಗೆ ಅರ್ಪಿಸಿಕೊಂಡು ಬಂದಿವೆ. ಹಾಗಾಗಿ ಮನೆ ಮತ್ತು ಮಠಮಾನ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ದೊಡ್ಡಮೇಟಿಕುರ್ಕೆ ಬೂದಿಹಾಳ್ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ತಾಲೂಕಿನ ಚಿಕ್ಕಮೇಟಿಕುರ್ಕೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕುಪ್ಪೂರು ಗದ್ದಿಗೆ ಮಠಕ್ಕೆ ಇತ್ತೀಚೆಗೆ ನೂತನ ಪಟ್ಟಾಧಿಕಾರ ವಹಿಸಿಕೊಂಡ ಶ್ರೀ ತೇಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಾ, ಇತ್ತೀಚೆಗೆ ಸರಿಯಾದ ಸಂಸ್ಕಾರವಿಲ್ಲದೆ ಗುರುಹಿರಿಯರಲ್ಲಿ ಗೌರವ, ತಂದೆ ತಾಯಿಗಳ ಪೋಷಣೆ ಲೋಪದಿಂದ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ, ಇದೊಂದು ವಿಪರ್ಯಾಸದ ಸಂಗತಿ ಎಂದರು. ನೂತನ ಪಟ್ಟಾಧಿಕಾರಿಗಳಾದ ಶ್ರೀ ತೇಜೇಶ್ವರ ಮಹಾಸ್ವಾಮಿಗಳು ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಭಕ್ತಾದಿಗಳನ್ನು ಮಠದ ಕಡೆ ಗಮನ ಸೆಳೆದು ಸಮಾಜದಲ್ಲಿ ಸಮಾಜಮುಖಿಯಾಗಿ ಬೆಳೆಯುವ ಲಕ್ಷಣಗಳನ್ನು ಅವರಲ್ಲಿ ಕಾಣುತ್ತಿದ್ದೇವೆ ಎಂದರು.

ಕುಪ್ಪೂರು ಗದ್ದಿಗೆ ಮಠದ ಆಡಳಿತಾಧಿಕಾರಿಗಳಾದ ವಾಗೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮನುಷ್ಯ ಆಧುನಿಕ ಜೀವನಶೈಲಿಗೆ ಮಾರುಹೋಗಿ ಬಿಡುವಿಲ್ಲದ ದುಡಿಮೆಯಿಂದ ಹಣದ ವ್ಯಾಮೋಹಕ್ಕೆ ಜಾರುತ್ತಿದ್ದಾನೆ. ಮಕ್ಕಳಿಗೆ ಸರಿಯಾದ ಸಮಯಕ್ಕೆ ಸಂಸ್ಕಾರ ನೀಡದೆ ಸಮಾಜ ತನ್ನ ಮೂಲ ಸಂಸ್ಕಾರವನ್ನು ಕಳೆದುಕೊಂಡಿದೆ. ಪೋಷಕರು ಬಿಡುವಿನ ವೇಳೆ ಮಕ್ಕಳನ್ನು ಮಠಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಿಗೆ ಕರೆತಂದು ಅವರನ್ನು ಸುಸಂಸ್ಕೃತರನ್ನಾಗಿ ಮಾಡುವ ಅಗತ್ಯವಿದೆ ಎಂದರು.

ನೂತನ ಶ್ರೀಗಳಾದ ತೇಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಕ್ಕಮೇಟಿಕುರ್ಕೆ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಧಾರ್ಮಿಕ ಆಚರಣೆಗಳನ್ನು ಬಳಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕಾಗಿದೆ. ಭಾರತೀಯ ಸಂಸ್ಕೃತಿ ಪರಂಪರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಬೆಳೆಸಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಓಂಕಾರಪ್ಪ, ಎಸ್.ಸಿ ಚಂದ್ರಪ್ಪ, ಹೊಸಳ್ಳಿ ಮಲ್ಲಿಕಾರ್ಜುನಪ್ಪ, ಚಿಕ್ಕಮೇಟಿಕುರ್ಕೆ ಗ್ರಾಮದ ಹಿರಿಯ ಮುಖಂಡರು, ಗ್ರಾಮಸ್ಥರು, ಶಶಿವಾಳ ಗ್ರಾಮಸ್ಥರು ಹಾಜರಿದ್ದರು.

Share this article