ತುಮಕೂರು : ನಾಡಿನ ಭವಿಷ್ಯವನ್ನೇ ರೂಪಿಸಿದ ಮಹಾನ್ ಚೇತನ, ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜು ಅರಸು ಎಂದು ಸಾಹಿತಿ ಹಾಗೂ ಚಿಂತಕರಾದ ಡಾ. ನಟರಾಜು ಹೇಳಿದರು.
ರಾಜಕೀಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರು, ಗೇಣಿದಾರರ ಬಳಿಯಿದ್ದ ಭೂಮಿಯನ್ನು ಉಳುವವನೇ ಭೂಮಿ ಒಡೆಯ ಎಂಬ ತತ್ವದಡಿ ಕೃಷಿಕರಿಗೆ ಒದಗಿಸಿಕೊಟ್ಟ ಕ್ರಾಂತಿಕಾರಿ ನಾಯಕ. ಸಂವಿಧಾನದ ಆಶಯಗಳನ್ನು ಅರಿತು, ಎಲ್.ಜಿ. ಹಾವನೂರು ವರದಿಯನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯದಿಂದ ವಂಚಿತರಾದ ಕೋಟ್ಯಂತರ ಜನರಿಗೆ ಧ್ವನಿಯಾದರು ಎಂದರು.ಕಲಾ ನಿಕಾಯದ ಡೀನರು ಹಾಗೂ ಹಿಂದುಳಿದ ವರ್ಗಗಳ ಕೋಶದ ನಿರ್ದೇಶಕರಾದ ಪ್ರೊ. ಪರಶುರಾಮ ಕೆ.ಜಿ. ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ತಲುಪಿಸಿದ ಅರಸು ಅವರ ಸಾಧನೆ ಮತ್ತು ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ. ಎಚ್. ನಾಗಭೂಷಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಯನ ಪೀಠದ ಸಂಯೋಜಕರಾದ ಡಾ. ಗುಂಡೇಗೌಡ ಸ್ವಾಗತಿಸಿದರು. ಪ್ರಾದ್ಯಾಪಕ ಪ್ರೊ. ಪರಮಶಿವಯ್ಯ, ಪ್ರೊ. ನಾಗಭೂಷಣ್ ಬಗ್ಗನಡು, ಡಾ. ಸುನಿತಾ ಇನ್ನಿತರರಿದ್ದರು.