ಬಿಜೆಪಿ ಸರ್ಕಾರ ನೀಡಿದ್ದ ಹಕ್ಕುಪತ್ರಗಳು ಅಸಿಂಧುವೇ?: ಕೆಆರ್‌ಎಸ್, ಮೊಗರಹಳ್ಳಿ ಮಂಟಿ ಗ್ರಾಮಗಳ ನಿವಾಸಿಗಳ ಆತಂಕ

KannadaprabhaNewsNetwork |  
Published : Jun 08, 2025, 02:31 AM IST
೭ಕೆಎಂಎನ್‌ಡಿ-೪ಸರ್ಕಾರದ ವತಿಯಿಂದ ಕಿಮ್ಮತ್ತು ಪಡೆದುಕೊಂಡು ಬಡವರಿಗೆ ನೀಡಿರುವ ಹಕ್ಕುಪತ್ರ. | Kannada Prabha

ಸಾರಾಂಶ

ಶ್ರೀರಂಗಪಟ್ಟಣದಲ್ಲಿ ವಿತರಿಸಲಾಗಿದ್ದ ಹಕ್ಕುಪತ್ರಗಳ ಬಗ್ಗೆ ತನಿಖೆ ನಡೆಸುವಂತೆ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಕಳೆದ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದರಿಂದ ಈಗಿನ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಕಮಿಟಿ ರಚಿಸಿ, ನಿವಾಸಿಗಳಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಎರಡೆರಡು ಬಾರಿ ಅಳತೆ ಸಹ ಮಾಡಲಾಗಿದೆ.

ಎಲ್.ವಿ.ನವೀನ್‌ ಕುಮಾರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕೆಆರ್‌ಎಸ್ ಮತ್ತು ಮೊಗರಹಳ್ಳಿ ಮಂಟಿ ಗ್ರಾಮಗಳ ನಿವಾಸಿಗಳಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಹಕ್ಕುಪತ್ರಗಳು ಸಿಂಧುವಲ್ಲ ಎಂಬ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಅವರ ಹೇಳಿಕೆಯಿಂದ ಹಕ್ಕುಪತ್ರ ಪಡೆದು ಇ- ಸ್ವತ್ತಿಗಾಗಿ ಕಾಯುತ್ತಿರುವ ಗ್ರಾಮಗಳ ನಿವಾಸಿಗಳನ್ನು ಗೊಂದಲಕ್ಕೆ ಸಿಲುಕಿಸುವ ಜೊತೆಗೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಕಳೆದ ೨೦೨೨ರ ಜು.೨೧ ರಂದು ಬಿಜೆಪಿ ಸರ್ಕಾರವಿದ್ದ ಸಮಯದಲ್ಲಿ ಅಂದು ಶಾಸಕರಾಗಿದ್ದ ರವೀಂದ್ರ ಶ್ರೀಕಂಠಯ್ಯನವರ ಒತ್ತಾಯದ ಮೇರೆಗೆ ಸರ್ಕಾರದ ವತಿಯಿಂದ ಅಧಿಸೂಚನೆ ಹೊರಡಿಸಿ, ತಾಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯ ಕೆಆರ್‌ಎಸ್ ಗ್ರಾಮದಲ್ಲಿ ೭೫೦ ರಿಂದ ೮೦೦, ಮೊಗರಹಳ್ಳಿ ಮಂಟಿ ೩೦೦ಕ್ಕೂ ಹೆಚ್ಚು, ಹುಲಿಕೆರೆ ೩೦ ಮಂದಿ, ಬೆಳಗೊಳ ೩೦ ರಿಂದ ೪೦ ಹಾಗೂ ಹೊಸಆನಂದೂರು ಗ್ರಾಮದಲ್ಲಿ ೩೪೫ ಸೇರಿದಂತೆ ಇತರೆ ಗ್ರಾಮಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ನೂರಾರು ವರ್ಷಗಳಿಂದ ವಾಸಿಸುತ್ತಿದ್ದ ಸಾವಿರಕ್ಕೂ ಹೆಚ್ಚು ಮಂದಿಗೆ ಕಿಮ್ಮತ್ತು ಕಟ್ಟಿಸಿಕೊಂಡು ಹಕ್ಕುಪತ್ರಗಳನ್ನು ಸರ್ಕಾರ ವಿತರಿಸಿತ್ತು.

ಈ ಗ್ರಾಮಗಳ ಪೈಕಿ ಹುಲಿಕರೆ, ಬೆಳಗೊಳ ಹಾಗೂ ಹೊಸ ಆನಂದೂರು ಗ್ರಾಮಗಳ ನಿವಾಸಿಗಳಿಗೆ ಪಂಚಾಯಿತಿ ವತಿಯಿಂದ ಈಗಾಗಲೇ ಇ- ಸ್ವತ್ತು ನೀಡಲಾಗಿದೆ. ಆದರೆ, ಕೆಆರ್‌ಎಸ್ ಹಾಗೂ ಮೊಗರಹಳ್ಳಿ ಮಂಟಿ ಗ್ರಾಮಗಳ ನಿವಾಸಿಗಳಿಗೆ ಈವರೆಗೂ ಪಂಚಾಯಿತಿ ವತಿಯಿಂದ ಇ-ಸ್ವತ್ತು ಸೇರಿದಂತೆ ಯಾವುದೇ ದಾಖಲಾತಿಗಳನ್ನು ಮಾಡಿಕೊಟ್ಟಿಲ್ಲ. ಇದರಿಂದ ಇವರು ಮೊದಲೇ ಆತಂಕಗೊಂಡಿದ್ದರು, ಜೊತೆಗೆ ಶಾಸಕರ ಹೇಳಿಕೆಯಿಂದ ಮುಂದೇನು ಎಂಬ ಚಿಂತೆಗೀಡುಮಾಡಿದೆ.

ಅಂದಿನ ಉಪ ತಹಸೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಿ ಮಾಡಿ ಮೂಲ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದಾರೆ. ಆದರೆ ಸ್ಥಳೀಯ ಪಂಚಾಯಿತಿಗಳಿಂದ ಇ- ಸ್ವತ್ತು ಮಾಡಿಕೊಡದ ಕಾರಣ ನಿವಾಸಿಗಳು ನೆಮ್ಮದಿಯಿಂದ ಮನೆ ನಿರ್ಮಿಸಿಕೊಂಡು ವಾಸಿಸಲು ಸಾಧ್ಯವಾಗದೆ, ಕನಿಷ್ಠ ಸೌಲ ಸೌಲಭ್ಯಗಳನ್ನು ಪಡೆದುಕೊಳ್ಳಲಾಗದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಮುಂದೆ ನಿಂತು ಅರ್ಹ ಫಲಾನುಭವಿಗಳನ್ನು ಗುರುತಿಸಿ, ಹಕ್ಕುಪತ್ರಗಳನ್ನು ನೀಡಿತ್ತು. ಆದರೆ ಈಗ ಅದನ್ನು ಶಾಸಕರು ಅಸಿಂಧು ಎನ್ನುತ್ತಿದ್ದಾರೆ. ಪ್ರತಿ ಬಾರಿ ಬದಲಾದ ಸರ್ಕಾರಗಳು ಇದೇ ಪ್ರವೃತ್ತಿ ಮುಂದುವರಿಸಿದರೆ ಹೇಗೆ ತಾನೆ ನಾವು ಒಂದು ಸೂರು ನಿರ್ಮಿಸಿಕೊಂಡು, ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ವಿತರಿಸಲಾಗಿದ್ದ ಹಕ್ಕುಪತ್ರಗಳ ಬಗ್ಗೆ ತನಿಖೆ ನಡೆಸುವಂತೆ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಕಳೆದ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದರಿಂದ ಈಗಿನ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಕಮಿಟಿ ರಚಿಸಿ, ನಿವಾಸಿಗಳಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಎರಡೆರಡು ಬಾರಿ ಅಳತೆ ಸಹ ಮಾಡಲಾಗಿದೆ. ಈ ಕಮಿಟಿ ಅಳತೆಯಲ್ಲಿ ವ್ಯತ್ಯಾಸ ಇರುವುದಾಗಿ ವರದಿ ನೀಡಿದೆ. ಆದರೆ, ಸರ್ಕಾರ ತನ್ನ ಅಧಿಸೂಚನೆಯಲ್ಲಿ ೪ ಸಾವಿರ ಅಡಿ ಮೀರದಂತೆ ನೀಡುವಂತೆ ತಿಳಿಸಿದ್ದರೂ ಸಹ ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

‘ವಿಧಾನಸಭಾ ಚುನಾವಣೆ ವೇಳೆ ಕೆಆರ್‌ಎಸ್ ಹಾಗೂ ಮೊಗರಹಳ್ಳಿ ಮಂಟಿ ಗ್ರಾಮಗಳಲ್ಲಿ ತಮಗೆ ಮತ ಕಡಿಮೆ ನೀಡಿದ್ದರು ಎಂಬ ಉದ್ದೇಶದಿಂದ ಈ ಗ್ರಾಮಗಳನ್ನೇ ಗುರಿಯಾಗಿಸಿಕೊಂಡು, ಈವರೆಗೂ ಪಂಚಾಯಿತಿಗಳಿಂದ ಇ- ಸ್ವತ್ತು ಮಾಡಿಸಿಕೊಡದೆ ರಾಜಕೀಯ ದುರುದ್ದೇಶದಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ.’

- ಸಿ.ಮಂಜುನಾಥ್, ಗ್ರಾಪಂ ಸದಸ್ಯ, ಕೆಆರ್‌ಎಸ್

ಸರ್ಕಾರವೇ ನೀಡಿರುವ ಹಕ್ಕುಪತ್ರಗಳನ್ನು ಅಸಿಂಧು ಎನ್ನುವುದಾದರೆ ಹೇಗೆ. ಇದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಇ-ಸ್ವತ್ತಿಗೆ ಕಾಯುತ್ತಿರುವ ನಿವಾಸಿಗಳನ್ನು ಕಾಡುತ್ತಿರುವ ಆತಂಕ- ಗೊಂದಲವನ್ನು ನಿವಾರಿಸಬೇಕು. ಬಡವರ ಬದುಕಿನ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಒಂದು ಸರ್ಕಾರ ಹಕ್ಕುಪತ್ರ ಕೊಟ್ಟು ಮತ್ತೊಂದು ಸರ್ಕಾರ ಅದನ್ನು ಅಸಿಂಧು ಎಂದರೆ ಹೇಗೆ?

- ನಾಗರಾಜು, ಸ್ಥಳೀಯರು

----------------------

ಹಕ್ಕುಪತ್ರ ನೀಡುವ ಸಮಯದಲ್ಲಿ ಯಾವ ಮಾನದಂಡದ ಆಧಾರ ಮೇಲೆ ಅಥವಾ ನಿಯಮ ಪಾಲನೆ ಮಾಡಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ ಎಂಬ ಬಗ್ಗೆ ತಹಸೀಲ್ದಾರ್ ಅವರಿಂದ ಪರಿಶೀಲಿಸಲಾಗುವುದು. ಕ್ರಮಬದ್ಧವಾಗಿ ಹಕ್ಕುಪತ್ರಗಳನ್ನು ವಿತರಿಸಿದ್ದರೆ ಮತ್ತೆ ವಿತರಿಸುವ ಪ್ರಶ್ನೆ ಬರುವುದಿಲ್ಲ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ