ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ‘ಶಕ್ತಿ’ ದಿನಪತ್ರಿಕೆಯ ಕಚೇರಿ ಆವರಣದಲ್ಲಿ ಶಕ್ತಿಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ನಿರ್ದೇಶಕ ಪ್ರಶಾಂತ್ ಟಿ.ಆರ್, ಮಡಿಕೇರಿಯ ಬರಹಗಾರ್ತಿ ಸುನಿತಾ ಟಿ.ಆರ್ ಅವರು ರಚಿಸಿರುವ ‘ಸೌಪರ್ಣಿಕ’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ಚಿತ್ರದ ಚಿತ್ರೀಕರಣ ಕೊಡಗು, ಮೈಸೂರು ಮತ್ತು ಮಂಗಳೂರಿನಲ್ಲಿ ನಡೆಯಲಿದೆ ಎಂದರು.ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ಚಿತ್ರದಲ್ಲಿ ಸಂಪಾದಕನ ಪಾತ್ರ ನಿರ್ವಹಿಸಿದ್ದು, ಇಂದು ಅವರ ಪಾತ್ರವನ್ನು ಚಿತ್ರೀಕರಿಸಲಾಯಿತು.
ಶಕ್ತಿಯ ಉಪ ಸಂಪಾದಕರಾದ ಕಾಯಪಂಡ ಶಶಿ ಸೋಮಯ್ಯ, ಜಿ.ಆರ್.ಪ್ರಜ್ವಲ್, ಹಿರಿಯ ಪತ್ರಕರ್ತ ಶ್ರೀಧರ್ ಹೂವಲ್ಲಿ, ನ್ಯೂಸ್ ಡೆಸ್ಕ್ ಸಂಪಾದಕ ಎಸ್.ಕೆ.ಲಕ್ಷ್ಮೀಶ್ ಮತ್ತಿತರ ಪ್ರಮುಖರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.ಚಿತ್ರಕ್ಕೆ ಸಂಗೀತ ನಿರ್ದೇಶಕ ಎಂ.ಎನ್.ಕೃಪಾಕರ್ ಸಂಗೀತ, ಕೆ.ಶಿವರುದ್ರಯ್ಯ ಸಂಭಾಷಣೆ ನೀಡಿದ್ದು, ವಂಶಿ ಸಂಕಲನ ಹಾಗೂ ಎಂ.ಆರ್.ಫಿರೋಜ್ ಖಾನ್ ಸುಂಟಿಕೊಪ್ಪ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಸುನಿತಾ ಟಿ.ಆರ್, ಬಿ.ಜಿ.ಅನಂತಶಯನ, ಶೃತಿ ಸಂಜೀವ್, ದೀಪಿಕಾ ಸಂದೀಪ್, ಶರ್ಮಿಳಾ ರಮೇಶ್, ತಷ್ಮಾ ಮುತ್ತಮ್ಮ, ಸದಾ ವರುಣ್ ಕುಟ್ಟಪ್ಪ ಮತ್ತಿತರರು ಪಾತ್ರ ವರ್ಗದಲ್ಲಿದ್ದಾರೆ.