ಅಡಿಕೆ ಎಲೆಚುಕ್ಕೆ ರೋಗ, ಅಡಿಕೆ ಬೆಳೆ ಸಮಗ್ರ ನಿರ್ವಹಣೆ ವಿಚಾರ ಸಂಕಿರಣ ಕಾರ್ಕಳ: ರಾಸಾಯನಿಕ ಸಿಂಪಡಣೆ ಹೆಚ್ಚಾದ ಪರಿಣಾಮ ಬೆಳೆಗಳಲ್ಲಿ ವಿವಿಧ ರೋಗಗಳು ಹೆಚ್ಚಾಗುತ್ತಿವೆ ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.ಅವರು ತೋಟಗಾರಿಕಾ ಇಲಾಖೆ ಕಾರ್ಕಳ, ಮಾಳ–ಕೆರುವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಳ ಹಾಗೂ ಬಜಗೋಳಿ ಬಿಲ್ಲವ ಸಮಾಜ ಆಶ್ರಯದಲ್ಲಿ ಬಜಗೋಳಿಯ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಅಡಿಕೆ ಎಲೆಚುಕ್ಕೆ ರೋಗ ಹಾಗೂ ಅಡಿಕೆ ಬೆಳೆ ಸಮಗ್ರ ನಿರ್ವಹಣೆ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷವಾಗಿ ಮಲೆನಾಡಿನ ತಪ್ಪಲಿನ ಪ್ರದೇಶಗಳಲ್ಲಿ ಬೇರುಹುಳ ಸೇರಿದಂತೆ ಅನೇಕ ಕೀಟ–ರೋಗಗಳಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಉತ್ತಮವಾಗಿದ್ದರೂ ಇಳುವರಿ ಇಲ್ಲದಿದ್ದರೆ ರೈತರು ಬದುಕು ಸಾಗಿಸಲು ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವೈಜ್ಞಾನಿಕ ಕೃಷಿ ವಿಧಾನಗಳನ್ನು ರೈತರು ಅನುಸರಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರುತಿ ಡಿ. ಅತಿಕಾರಿ ಮಾತನಾಡಿ, ಹಿಂದೆ ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಕೊಳೆ ರೋಗ, ಚೆಂಡೆ ಕೊಳೆ ರೋಗ, ಎಲೆಚುಕ್ಕೆ ರೋಗ ಸೇರಿದಂತೆ ಅನೇಕ ಸಮಸ್ಯೆಗಳು ರೈತರನ್ನು ಕಂಗಾಲು ಮಾಡುತ್ತಿವೆ. ಇಂತಹ ವಿಚಾರ ಸಂಕಿರಣಗಳ ಮೂಲಕ ರೈತರು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಕಳ ತೋಟಗಾರಿಕಾ ಇಲಾಖೆಯ ನಿರ್ದೇಶಕ ಶ್ರೀನಿವಾಸ ಬಿ.ವಿ. ಪ್ರಸ್ತಾವಿಕವಾಗಿ ಮಾತನಾಡಿ, ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಅಡಿಕೆ ಕೃಷಿ ರೈತರ ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಹವಾಮಾನ ವೈಪರೀತ್ಯ ಹಾಗೂ ನಿರ್ವಹಣೆಯಲ್ಲಿನ ಕೆಲ ತಪ್ಪುಗಳಿಂದ ಅಡಿಕೆ ಬೆಳೆ ಹಲವು ರೋಗಗಳಿಂದ ಬಾಧಿತವಾಗುತ್ತಿದೆ. ವಿಶೇಷವಾಗಿ ಎಲೆಚುಕ್ಕೆ ರೋಗ ಕಳೆದ ಐದು ವರ್ಷಗಳಿಂದ ತೀವ್ರವಾಗಿ ಬಾಧಿಸುತ್ತಿದ್ದು, ಮುಂದುವರೆದ ಚಳಿಯೂ ರೋಗದ ತೀವ್ರತೆಯನ್ನು ಹೆಚ್ಚಿಸುತ್ತಿದೆ ಎಂದು ವಿವರಿಸಿದರು.
ಮಾಳ–ಕೆರುವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಳ ಇದರ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ಸಮಗ್ರ ಕೃಷಿ ಮಾಹಿತಿಗಳನ್ನು ರೈತರು ಅಳವಡಿಸಿಕೊಂಡು ಆಧುನಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಅಡಿಕೆ ಕೃಷಿ ರೋಗಗಳಿಂದ ಮುಕ್ತವಾಗಿ ರೈತ ಕುಟುಂಬಗಳು ನೆಮ್ಮದಿಯಿಂದ ಹಾಗೂ ಆಶಾದಾಯಕವಾಗಿ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು. ಬಿಲ್ಲವ ಸಮಾಜದ ಅಧ್ಯಕ್ಷ ಭಾಸ್ಕರ ಪೂಜಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾಳ–ಕೆರುವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಳ ಇದರ ಉಪಾಧ್ಯಕ್ಷ ನಾಗೇಶ್ ಭಂಡಾರಿ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಸಸ್ಯರೋಗ ತಜ್ಞ ಡಾ. ವಿನಾಯಕ ಹೆಗ್ಡೆ, ಉಡುಪಿ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಇದರ ಕೃಷಿ ತಜ್ಞ ಡಾ. ಚೈತನ್ಯ, ಕೀಟ ತಜ್ಞ ಡಾ. ರೇವಣ್ಣ ಹಾಗೂ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯರೋಗ ತಜ್ಞ ಡಾ. ಸಂಜೀವ ಜಕಾತಿಮಠ ಅವರು ಅಡಿಕೆ ಬೆಳೆ ರೋಗಗಳು, ನಿಯಂತ್ರಣ ಕ್ರಮಗಳು ಹಾಗೂ ಸಮಗ್ರ ನಿರ್ವಹಣಾ ವಿಧಾನಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.
ಸುರೇಶ್ ಸಾಲಿಯಾನ್ ಅವರು ರೈತ ಗೀತೆ ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಮಾಳ–ಕೆರುವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಎಂ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.