ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ: ಆತಂಕ ನಿವಾರಣೆಗೆ ಪ್ರಯತ್ನ

KannadaprabhaNewsNetwork |  
Published : Oct 29, 2025, 11:00 PM IST

ಸಾರಾಂಶ

ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಸಭೆ ಮಂಗಳವಾರ ಧರ್ಮಸ್ಥಳದಲ್ಲಿ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯಿತು.

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ (WHO) ಮೂಲಕ ಅಡಕೆ ಕ್ಯಾನ್ಸರ್‌ಕಾರಕ, ಅಡಕೆ ನಿಷೇಧ ವಿಚಾರ ಪದೇ ಪದೇ ಸುದ್ದಿಯಾಗುತ್ತಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಭೆಗೆ ತೆರಳುವ ಭಾರತದ ಪ್ರತಿನಿಧಿಗಳಿಗೆ ಅಡಕೆಯ ಔಷಧೀಯ ಮೌಲ್ಯಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಅಲ್ಲದೆ ಅಡಕೆಯ ಅಧ್ಯಯನದ ಬಗ್ಗೆ ಹಾಗೂ ಕೃಷಿಕರ ಬದುಕಿನ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆ ರೂಪಿಸಲು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ (ಎ ಆರ್‌ ಡಿ ಎಫ್)‌ ಸಭೆಯಲ್ಲಿ ನಿರ್ಧರಿಸಲಾಗಿದೆ.ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಸಭೆ ಮಂಗಳವಾರ ಧರ್ಮಸ್ಥಳದಲ್ಲಿ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಅಡಕೆ ಸಂಶೋಧನೆಗಳ ಬಗ್ಗೆ ಚರ್ಚೆ ನಡೆಯಿತು. ಅಡಕೆಯ ವಿವಿಧ ಔಷಧೀಯ ಗುಣಮಟ್ಟಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ನಿರ್ಧರಿಸಲಾಯಿತು. ಅಡಕೆ ಹಾನಿಕಾರಕ ಅಲ್ಲ ಎಂಬ ಅಂಶ ಈಗಾಗಲೇ ಅಧ್ಯಯನದಿಂದ ಹೊರಬಂದಿದೆ. ಎ ಆರ್‌ ಡಿ ಎಫ್‌ ಹಾಗೂ ಜೆಡ್ಡು ಆಯುರ್ವೇದ ಸಂಸ್ಥೆ ಈ ಬಗ್ಗೆ ಮಾಡಿರುವ ಅಧ್ಯಯನವ ಅಂತಾರಾಷ್ಟ್ರೀಯ ಜರ್ನಲ್‌ ನಲ್ಲೂ ಪ್ರಕಟವಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ವಿದೇಶಿ ಅಡಕೆ ಆಮದು ತಡೆಗೆ ಅಡಕೆ ಕ್ವಾಲಿಟಿಯ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಈ ಬಗ್ಗೆ ಸುಸಜ್ಜಿತವಾದ ಪ್ರಯೋಗಾಲಯ ಸ್ಥಾಪನೆ ಅಗತ್ಯವಿದೆ. ಈಗಾಗಲೇ 63 ಕ್ಕೂ ಹೆಚ್ಚು ವಿದೇಶಿ ಅಡಕೆಯ ಸ್ಯಾಂಪಲ್‌ ಗಳನ್ನು ಎಆರ್‌ ಡಿಎಫ್‌ ಪರಿಶೀಲಿಸಿದೆ. ಇದಕ್ಕಾಗಿ ಮುಂದೆ ಪ್ರಯೋಗಾಲಯದ ಅಗತ್ಯ ಇದೆ ಎಂದು ತಿಳಿಸಲಾಯಿತು.

ಅಡಕೆ ಹಳದಿರೋಗ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ಸರ್ಕಾರದಿಂದ ಕ್ರಮವಾಗಬೇಕು. ಈ ಬಗ್ಗೆ ಒತ್ತಾಯ ಅಗತ್ಯವಿದೆ ಹಾಗೂ ಆ ಪ್ರದೇಶದಲ್ಲಿ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಲು ಯೋಜನೆಗೆ ಸಲಹೆ ನೀಡಲಾಯಿತು. ವಿಶೇಷವಾಗಿ ಸುಳ್ಯ, ಶೃಂಗೇರಿ ಹಾಗೂ ಕೊಪ್ಪ ತಾಲೂಕಿಗೆ ಆದ್ಯತೆ ನೀಡಬೇಕಾಗಿದೆ. ಅಡಕೆ ಕೊಳೆರೋಗದಿಂದ ಕೃಷಿಕರು ಸಂಕಷ್ಟ ಅನುಭವಿಸಿರುವ ಬಗ್ಗೆ ಚರ್ಚೆ ನಡೆಯಿತು. ಶೇ.70 ರಷ್ಟು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹಾರ ಕ್ರಮಗಳ ಬಗ್ಗೆಯೂ ಒತ್ತಾಯಿಸಲಾಯಿತು. ಅಡಕೆಯ ಇತರ ಬಳಕೆಯಾದ ಶಾಯಿ, ಅಡಕೆಯ ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಸಂಸ್ಥೆಗಳ ಮೂಲಕ ತಯಾರಿಗೆ ಸಲಹೆ ನೀಡಲಾಯಿತು.

ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಟ್ರಸ್ಟಿಗಳಾದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಅಡಕೆ ಮಹಾಮಂಡಲ ಅಧ್ಯಕ್ಷ ಅರಗ ಜ್ಞಾನೇಂದ್ರ, ಕ್ಯಾಂಪ್ಕೊ ಆಡಳಿತ ನಿರ್ದೇಶಕ ಬಿ. ವಿ. ಸತ್ಯನಾರಾಯಣ, ಟಿಎಸ್‌ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತುಮ್ಕೋಸ್‌ ಅಧ್ಯಕ್ಷ ಎಚ್‌. ಎಸ್‌. ಶಿವಕುಮಾರ್‌, ಅಡಕೆ ಕೃಷಿಕ ಸಂಶೋಧಕ ಬದನಾಜೆ ಶಂಕರ ಭಟ್‌, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ, ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್‌. ಕೇಶವ ಭಟ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!