ಎಡದಂಡೆ ಭಾಗದ ಕಾಲುವೆಗೆ ನೀರು, ಅಧಿಕಾರಿಗಳ ಜತೆ ವಾಗ್ವಾದ

KannadaprabhaNewsNetwork |  
Published : Jul 21, 2026, 02:00 AM IST
ತುಂಗಭದ್ರಾ ಜಲಾಶಯದ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರ ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹಾಗೂ ನೀರಾವರಿ ಇಲಾಖೆ ಮುಖ್ಯ ಅಭಿಯಂತರರ ನಡುವೆ ಮಾತಿನ ಚಕಮಕಿ ನಡೆಯಿತು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಮುಖ್ಯ ಅಭಿಯಂತರರು ಹಾಗೂ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ನಡುವೆ ಮಾತಿನ ಚಕಮಕಿ ನಡೆಯಿತು.

ಮುನಿರಾಬಾದ್‌: ತುಂಗಭದ್ರಾ ಜಲಾಶಯದ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಮುಖ್ಯ ಅಭಿಯಂತರರು ಹಾಗೂ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ನಡುವೆ ಮಾತಿನ ಚಕಮಕಿ ನಡೆಯಿತು.

ಹೇಮಲತಾ ನಾಯಕ, ಜಲಾಶಯದ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರನ್ನು ಹರಿಸುವಂತೆ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರನ್ನು ಆಗ್ರಹಿಸಿದರು. ಎಡದಂಡೆ ಭಾಗದವರಿಗೆ ಬಚಾವತ್ ತೀರ್ಪಿನಲ್ಲಿ ಬೆಳೆಗಳನ್ನು ಬೆಳೆಯಲು 5.6 ಟಿಎಂಸಿ ನೀರು ಮೀಸಲಿಡಲಾಗಿದೆ. ಈ ಕಾಲುವೆಗಳಿಗೆ ಇದುವರೆಗೂ ನೀರಾವರಿ ಅಧಿಕಾರಿಗಳು ನೀರು ಹರಿಸಿಲ್ಲ. ಆದರೆ ಬಲದಂಡೆ ಭಾಗದ ವಿಜಯನಗರ ಕಾಲದ ಕಾಲುವೆಗಳಾದ ರಾಯ ಹಾಗೂ ಬಸವಣ್ಣ ಕಾಲುವೆಗಳಲ್ಲಿ ನೀರು ಹರಿಸಲಾಗಿದೆ. ಈ ಪಕ್ಷಪಾತ ಧೋರಣೆ ಸರಿಯಲ್ಲ, ತಕ್ಷಣ ಎಡದಂಡೆ ಭಾಗದ ಕಾಲುವೆಯಲ್ಲಿ ನೀರು ಹರಿಸುವಂತೆ ಮುಖ್ಯ ಅಭಿಯಂತರ ಮನೋಜ್ ಕುಮಾರ್ ಅವರನ್ನು ಆಗ್ರಹಿಸಿದರು.

ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ಅಧಿಕಾರ ತಮಗೆ ಇಲ್ಲ ಎಂದು ಮುಖ್ಯ ಅಭಿಯಂತರರು ಹೇಳುತ್ತಿದ್ದಂತೆ, ನಿಮಗೆ ಅಧಿಕಾರ ಇಲ್ಲ ಎಂದಾದರೆ ಬಲದಂಡೆ ಭಾಗದ ಕಾಲುವೆಗಳಿಗೆ ಹೇಗೆ ನೀರು ಹರಿಸಿದಿರಿ? ಎಂದು ಹೇಮಲತಾ ನಾಯಕ ಪ್ರಶ್ನಿಸಿದರು. ಆಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ರಾಯ ಮತ್ತು ಬಸವಣ್ಣ ಕಾಲುವೆಯಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಕಲಬುರಗಿ ವಿಭಾಗೀಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ, ರೈತರು ಮುಖ್ಯ ಅಭಿಯಂತರ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತಿರುವ ವಿಷಯವನ್ನು ಗಮನಕ್ಕೆ ತಂದರು. ಎಡದಂಡೆ ಭಾಗದ ವಿಜಯನಗರ ಕಾಲುವೆಯ ಭಾಗದ ರೈತರ ಗದ್ದೆಗಳಿಗೆ ಬಚಾವತ್ ತೀರ್ಪಿನಂತೆ ನೀರು ಹರಿಸುವಂತೆ ಮನವಿ ಮಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ತುಂಗಭದ್ರಾ ಜಲಾಶಯದ ನೀರು ಕುಡಿಯಲಿಕ್ಕೆ ಮಾತ್ರ ಬಳಸಲಾಗುತ್ತದೆ, ನೀರಾವರಿಗೆ ನೀಡಲು ಸಾಧ್ಯವಿಲ್ಲ ಎಂದು ವಿಭಾಗೀಯ ಆಯುಕ್ತರು ಸ್ಪಷ್ಟಪಡಿಸಿದರು. ಬಲದಂಡೆ ಭಾಗದ ರಾಯ ಹಾಗೂ ಬಸವಣ್ಣ ಕಾಲುವೆಗಳಿಗೆ ನೀರಾವರಿಗಾಗಿ ನೀರು ಹರಿಸಿರುವ ವಿಚಾರವನ್ನು ಮುನವಳ್ಳಿ ಅವರ ಗಮನಕ್ಕೆ ತಂದರು. ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ಹರಿಸಿಲ್ಲ ಎಂದರು. ಮತ್ತೊಮ್ಮೆ ಅಧಿಕಾರಿಗಳು ಹಾಗೂ ಹೇಮಲತಾ ನಾಯಕ ನಡುವೆ ವಾಗ್ವಾದ ನಡೆಯಿತು.

ನೀರಾವರಿಗಾಗಿ ನೀರು ಹರಿಸುವ ಅಧಿಕಾರ ನನಗೂ ಇಲ್ಲ ಎಂದು ಕಲಬುರಗಿ ವಿಭಾಗೀಯ ಆಯುಕ್ತರು ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಗಮನಕ್ಕೆ ತರುವುದು ಸೂಕ್ತ ಎಂದು ಅವರು ಮಾಜಿ ಶಾಸಕ ಪರಣ್ಣ ಅವರಿಗೆ ತಿಳಿಸಿದರು.

ಬಿಜೆಪಿ ಮುಖಂಡ ಡಾ‌. ಬಸವರಾಜ ಕ್ಯಾವಟರ್, ಪ್ರದೀಪ್ ಪಲ್ಲೇದ, ಪ್ರಭುರಾಜ ಪಾಟೀಲ ಉಪಸ್ಥಿತರಿದ್ದರು.

ಬೃಹತ್ ಪ್ರತಿಭಟನೆಗೆ ನಿರ್ಧಾರ: ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗೆ ಜು. 21ರಂದು ಮನವಿ ಸಲ್ಲಿಸಲಾಗುವುದು. ಜಿಲ್ಲಾಡಳಿತದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದರೆ ರೈತರು ಆನೆಗುಂದಿಯಿಂದ ಮುನಿರಾಬಾದ್‌ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ ಎಂದು ಪ್ರಗತಿಪರ ರೈತ ಪ್ರದೀಪ್ ಪಲ್ಲೇದ ತಿಳಿಸಿದರು.

ವಿಕೋಪಕ್ಕೆ ತಿರುಗಿದ ರೈತರ ಪ್ರತಿಭಟನೆ, ಆತ್ಮಹತ್ಯೆಗೆ ಯತ್ನಿಸಿದ ರೈತ ಮುಖಂಡ: ಕಳೆದ ಮೂರು ದಿನಗಳಿಂದ ವಿಜಯನಗರ -ಬಳ್ಳಾರಿ ಜಿಲ್ಲೆಯ ಪ್ರಮುಖ ನಗರಗಳಿಗೆ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಹರಿಸುವಂತೆ ಆಗ್ರಹಿಸಿ ಬಲದಂಡೆ ಭಾಗದ ‌ರೈತರು ಇಲ್ಲಿನ ಮುಖ್ಯ ಅಭಿಯಂತರ ಕಚೇರಿಯ ಮುಂದೆ ನಡೆಸುತ್ತಿದ್ದ ಅನಿರ್ದಿಷ್ಟ ಅವಧಿ ಮುಷ್ಕರ ಸೋಮವಾರ ವಿಕೋಪಕ್ಕೆ ತಿರುಗಿತು.

ನೀರಾವರಿ ಇಲಾಖೆಯ ಅಧಿಕಾರಿಗಳು ಬಲದಂಡೆ ಭಾಗದ ನಗರಗಳಿಗೆ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಹರಿಸುವ ವಿಷಯದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಮನನೊಂದ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಎಸ್.ಎ. ಖಾದ್ರಿ ತುಂಗಭದ್ರಾ ಜಲಾಶಯದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಜಲಾಶಯದ ಕಡೆಗೆ ತೆರಳುತ್ತಿದ್ದಾಗ ಪೊಲೀಸರು ತಡೆದಿದ್ದಾರೆ.ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ರೈತ ಮುಖಂಡ ಎಸ್.ಎ. ಖಾದ್ರಿ, ನಾವು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ನಗರಗಳು ಮತ್ತು ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಕೇಳುತ್ತಿದ್ದೇವೆಯೇ ವಿನಃ ಬೆಳೆ ಬೆಳೆಯಲು ನೀರು ಕೇಳುತ್ತಿಲ್ಲ. ಆದರೂ ಅಧಿಕಾರಿಗಳು ಮಾನವೀಯತೆಯಿಂದ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ವರ್ತನೆಯಿಂದ ಬೇಸತ್ತು ತಾವು ಆತ್ಮಹತ್ಯೆಗೆ ಮುಂದಾಗಿದ್ದಾಗಿ ಹೇಳಿದರು.

----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲರ ಮಾಸಾಶನಕ್ಕೆ ಕುಟುಂಬದ ಆದಾಯ ಮಿತಿ ರದ್ಧತಿಗೆ ಆಗ್ರಹ
ಕಾರಟಗಿಯಲ್ಲಿ ಇಂದಿನಿಂದ ಶಾಶ್ವತ ನ್ಯಾಯಾಲಯ