ರಾಮನಗರ: ಆಶ್ರಯ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಜಮೀನಿನಲ್ಲಿ ನಿವೇಶನ ಕಲ್ಪಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಕನಕಪುರ ತಾಲೂಕು ಅರ್ಜುನಹಳ್ಳಿ ತಾಂಡ್ಯದ ಗ್ರಾಮಸ್ಥರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಅರ್ಜುನಹಳ್ಳಿ ತಾಂಡ್ಯದ ನಿವಾಸಿಗಳು ಲಂಬಾಣಿ (ಎಸ್ಸಿ) ಜನಾಂಗದವರಾಗಿದ್ದು, ಸರ್ಕಾರ ವಸತಿ ಯೋಜನೆ ಅಡಿಲ್ಲಿ ಸರ್ವೆ ನಂಬರ್ 135 ಮತ್ತು 137ರಲ್ಲಿ ನಿವೇಶನ ನೀಡಿ ಹಕ್ಕು ಪತ್ರ ಮತ್ತು ಇ ಖಾತೆ ನೀಡಿದೆ. ಆದರೆ, ಸೋಮಿಬಾಯಿ ಮತ್ತು ಅವರ ಮಕ್ಕಳು ಈ ಭಾಗ ಒತ್ತುವರಿಯಾಗಿದೆ ಎಂದು ಉಚ್ಛ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿದ್ದಾರೆ ಎಂದು ಆರೋಪಿಸಿದರು.
ಭೂ ಮಾಪನ ಇಲಾಖೆ ಅಧಿಕಾರಿಗಳು ಹಲವು ಬಾರಿ ಸರ್ವೆ ಮಾಡಿ ಕಲ್ಲು ಬಾಂದುಗಳನ್ನು ಹಾಕಿದ್ದು, ಅದನ್ನು ಕೆಡವಿದ್ದಾರೆ. ಸೋಮಿಬಾಯಿಗೆ ಸರ್ವೆ ನಂ.127-2ರಲ್ಲಿ 3 ಎಕರೆ, ನಾಗೇಶ ನಾಯ್ಕರಿಗೆ 127-1, 127-3ರಲ್ಲಿ 3 ಎಕರೆ 3 ಗುಂಟೆ ಜಮೀನು ಇದೆ. ಆಶ್ರಯ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಜಮೀನನ್ನು ಲಪಟಾಯಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.ಈ ಜಮೀನಿನ ವಿಚಾರವಾಗಿ ಬರುವ ಅಧಿಕಾರಿಗಳು ಮತ್ತು ಗ್ರಾಮಸ್ಥರ ಮೇಲೆ ಸೋಮಿಬಾಯಿ ಕುಟುಂಬದವರು ದೌರ್ಜನ್ಯದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸುತ್ತಿದ್ದಾರೆ. ಈಗಾಗಲೇ ಗ್ರಾಪಂ ಉಪಾಧ್ಯಕ್ಷ ಮುತ್ತುರಾಜ್ ನಾಯ್ಕ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇವರ ಕಿರುಕುಳ ತಾಳಲಾರದೆ ಎಷ್ಟೋ ಜನರು ಗ್ರಾಮ ತೊರೆದಿದ್ದಾರೆ. ನ್ಯಾಯಾಲಯದಲ್ಲಿ ವಾದ ಮಾಡಲು ವಕೀಲರನ್ನು ನೇಮಿಸಿಕೊಳ್ಳುವ ಶಕ್ತಿಯೂ ನಮಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮುತ್ತುರಾಜು ನಾಯ್ಕ, ನಾಗೇಶ್ ನಾಯ್ಕ, ವೆಂಕಟೇಶ್ ನಾಯ್ಕ ಮಾರಪ್ಪ ನಾಯ್ಕ, ರಾಜು ನಾಯ್ಕ, ಸಂಪತ್ ನಾಯ್ಕ, ರೂಪಾ ನಾಯ್ಕ, ಅಕ್ಷಯ್ ನಾಯ್ಕ, ಮಹದೇವಿ ಬಾಯಿ, ಜಯಬಾಯಿ, ಲಕ್ಷ್ಮಿ ಬಾಯಿ, ನೀಲಮ್ಮ ಬಾಯಿ, ಪುಟ್ಟಬಾಯಿ, ರತ್ನ ಬಾಯಿ, ಪಟ್ಟಿಬಾಯಿ ಮತ್ತಿತರರು ಭಾಗವಹಿಸಿದ್ದರು.
ಅರ್ಜುನಹಳ್ಳಿ ತಾಂಡ್ಯದ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಸ್ಥಾನಿಕ ಸಹಾಯಕ ಅಧಿಕಾರಿ ಪ್ರತಿಭಾ ಅವರಿಗೆ ಮನವಿ ಸಲ್ಲಿಸಿದರು.