ತಾಲೂಕಿನ ಬೆಳಗೆರೆ- ನಾರಾಯಣಪುರ, ರಂಗನಾಥಪುರ ಸೇರಿದಂತೆ ಸುತ್ತಲ ಹಳ್ಳಿಗಳ ಆರಾಧ್ಯ ದೈವ ಎಂದೇ ಹೆಸರುವಾಸಿಯಾಗಿರುವ ಬೆಳಗೆರೆಯ ಕೆರೆಯ ಮುಂದಿನ ತಟದಲ್ಲಿ ನೆಲೆಸಿರುವ ಲಕ್ಷ್ಮೀರಂಗನಾಥ ಸ್ವಾಮಿಯ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಬೆಳಗೆರೆ- ನಾರಾಯಣಪುರ, ರಂಗನಾಥಪುರ ಸೇರಿದಂತೆ ಸುತ್ತಲ ಹಳ್ಳಿಗಳ ಆರಾಧ್ಯ ದೈವ ಎಂದೇ ಹೆಸರುವಾಸಿಯಾಗಿರುವ ಬೆಳಗೆರೆಯ ಕೆರೆಯ ಮುಂದಿನ ತಟದಲ್ಲಿ ನೆಲೆಸಿರುವ ಲಕ್ಷ್ಮೀರಂಗನಾಥ ಸ್ವಾಮಿಯ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.ಕಳೆದ ಮೂರ್ನಾಲ್ಕು ದಿನಗಳಿಂದ ಆರಂಭವಾಗಿರುವ ಈ ಜಾತ್ರೆ ಹತ್ತಾರು ಆಚರಣೆಗಳ ಸುತ್ತ ಜನರ ನಂಬಿಕೆ ಮತ್ತು ತಲೆತಲಾಂತರದಿಂದ ನಡೆಸಿಕೊಂಡು ಬಂದಿರುವ ಆಚರಣೆಗಳನ್ನು ಇಂದಿಗೂ ಪರಿಪಾಲನೆ ಮಾಡುತ್ತಿರುವುದು ಇಲ್ಲಿನ ಜನರ ವಿಶೇಷತೆಯಾಗಿದೆ.
ಗ್ರಾಮದಿಂದ ಹೊರವಲಯದಲ್ಲಿ ಕೆರೆಯ ಮುಂದಲ ನಿರ್ಜನ ಪ್ರದೇಶದಲ್ಲಿ ನೆಲೆಯೂರಿರುವ ಲಕ್ಷ್ಮೀರಂಗನಾಥ ಸ್ವಾಮಿಯನ್ನು ಇಲ್ಲಿನ ಜನಪದರು ಆಡುಭಾಷೆಯಲ್ಲಿ ಬೆಳಗೆರೆ ರಂಗಪ್ಪನ ತೇರು ಎಂಬುದಾಗಿಯೇ ಕರೆಯಲ್ಪುಡುತ್ತಾರೆ. ಇಂತಹ ಜನಪದರ ಇಷ್ಟದ ದೈವನನ್ನು ಗುರುವಾರ ಸಕಲ ಭಕ್ತಾದಿಗಳು ರಥೋತ್ಸವದಲ್ಲಿ ಕಂಡು ಪುನೀತರಾದರು. ಸಕಲ ಭಕ್ತರ ಸಮ್ಮುಖದಲ್ಲಿ ರಂಗಪ್ಪನ ತೇರಿನ ಪಯಣ ಸಂಪನ್ನಗೊಂಡಿತು.ಕೆರೆ ಮುಂದಿನ ದಂಡೆಯ ತಟದಲ್ಲಿರುವ ರಂಗಪ್ಪನ ಗುಡಿ ಏಕಾಂತದ ತಾಣವಾಗಿರುವುದು ಈ ಭಾಗದ ಜನರಲ್ಲಿ ಈ ಸ್ಥಳಕ್ಕೆ ಬಂದು ಇಳಿದರೆ ಸಾಕು ನೆಮ್ಮದಿಯ ತಾಣವಾಗುವುದಂತೂ ಸತ್ಯ. ರಂಗಪ್ಪನ ಗುಡಿ ಒಂದು ರೀತಿಯಲ್ಲಿ ಗೊರ್ಲತ್ತು, ನಾರಾಯಣಪುರ, ತೋರೆಬೀರನಹಳ್ಳಿ, ಕೊನಿಗರಹಳ್ಳಿ, ಬೆಳಗೆರೆ ಹೀಗೆ ನಾನಾ ಊರುಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಸ್ಥಳ ಇದಾಗಿದೆ.
ಪ್ರತೀ ವರ್ಷದ ಯುಗಾದಿ ಹಬ್ಬ ಆದ ಹದಿನೈದು ದಿನಗಳಲ್ಲಿ ಜರುಗುವ ರಂಗಪ್ಪನ ತೇರಿಗೆ ಪುರಾತನ ಇತಿಹಾಸವಿದೆ. ಸುಮಾರು 15ನೇ ಶತಮಾನದಲ್ಲಿ ಹೊಯ್ಸಳ ದೊರೆ ''''''''ಬಿಟ್ಟಿದೇವ'''''''' ಈ ದೇಗುಲ ನಿರ್ಮಾಣ ಮಾಡಿದ್ದಾನೆ ಎಂಬ ಪ್ರತೀತಿ ಇದೆ.ದೇಗುಲದ ಬಲಭಾಗದಲ್ಲಿ ಇರುವ ಶಾಸನ ದೇವನಾಗರಿ ಶಿಲ್ಪಿಯಲ್ಲಿದ್ದು ಮಹತ್ವದ ಮಾಹಿತಿಗಳನ್ನು ಒಳಗೊಂಡಿದೆ. ಈ ದೇಗುಲವನ್ನು ಶುಕ್ರವಾರದ ದಿನವೇ ಆರಂಭಿಸಿದ ಮಾಹಿತಿಯೂ ಈ ಶಾಸನದಲ್ಲಿದೆ ಎನ್ನುತ್ತಾರೆ ಇಲ್ಲಿನವರು.
ಇಂತಹ ಐತಿಹಾಸಿಕ ಮಹತ್ವ ಹೊಂದಿರುವ ಬೆಳಗೆರೆ ರಂಗಪ್ಪನ ಜಾತ್ರೆಗೆ ಪ್ರತಿವರ್ಷವೂ ನೂರಾರು ಭಕ್ತಾಧಿಗಳು ಬರುವುದುಂಟು. ನೆರೆರಾಜ್ಯದ ತೆಲಂಗಾಣ, ಆಂಧ್ರಪ್ರದೇಶದ ಕಡೆಯಿಂದಲೂ ಈ ದೇವರ ಒಕ್ಕಲಿನ ಭಕ್ತರು ಬರುವುದುಂಟು.