ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂತೇಮರಹಳ್ಳಿಯಲ್ಲಿ ಎಳನೀರು ಮಾರುಕಟ್ಟೆ ಮಾಡುವಂತೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ತಾಲೂಕಿನ ಹೊಂಗನೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಎಪಿಎಂಸಿ ಮಾರುಕಟ್ಟೆ 11 ಎಕರೆಯಲ್ಲಿದೆ. ಸಂತೇಮರಹಳ್ಳಿ ಉಪ ಮಾರುಕಟ್ಟೆ 21 ಎಕರೆ ಇದ್ದು, ನಾಲ್ಕು ಕೂಡು ರಸ್ತೆ ಸೇರುವ ಸ್ಥಳ ಇದಾಗಿದ್ದು, ಮಂಡ್ಯ, ಮದ್ದೂರು ಎಳನೀರು ಮಾರುಕಟ್ಟೆ ಮಾದರಿಯಲ್ಲಿ ಜಿಲ್ಲೆಯ ರೈತರು ಬೆಳೆದ ಎಳನೀರನ್ನು ಯಾವುದೇ ದಲ್ಲಾಳಿ ಹಾವಳಿ ಇಲ್ಲದೆ ಲಾಭಾಂಶದಲ್ಲಿ ನೇರವಾಗಿ ಮಾರುಕಟ್ಟೆ ಮಾರಾಟ ಮಾಡಲು ಅನುಕೂಲವಾಗುವಂತೆ ಸಂತೇಮರಹಳ್ಳಿಯಲ್ಲಿ ಎಳನೀರು, ಮಾರುಕಟ್ಟೆ ಮಾಡುವಂತೆ ಚಿಂತಿಸಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ರೀತಿಯಲ್ಲಿ ಅನೇಕ ಚಿಂತನೆ ಮಾಡಲಾಗಿದೆ ಎಂದರು. ಹೊಂಗನೂರು ಗ್ರಾಮದಲ್ಲಿ 2.20 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿದ್ದೇನೆ. ಈ ಅನುದಾನ ಅಲ್ಲದೆ ಕೆಪಿಎನ್ ಶಾಲೆ ಬಂದರೆ ಅದಕ್ಕೂ ಹೆಚ್ಚುವರಿ ಅನುದಾನ ಆಗುತ್ತದೆ. ಮುಸ್ಲಿಮರ ಬೀದಿಗೂ 50 ಲಕ್ಷ ರು. ಅನುದಾನ ನೀಡಲಾಗಿದೆ. ಅಲ್ಲಿಗೆ ಎಲ್ಲ ಬೀದಿಗಳು ಸೇರಿಕೊಳ್ಳುತ್ತದೆ ಎಂದರು. ಗ್ರಾಮಕ್ಕೆ ₹2.20 ಲಕ್ಷದ ಜೊತೆಗೆ ಹಿಂದೆ ನಾನು ಶಾಸಕನಾಗಿದ್ದಾಗ ಹೊಂಗನೂರು ಹಿರಿಕೆರೆಗೆ ನಬಾರ್ಡ್ ಯೋಜನೆಯಡಿಯಲ್ಲಿ ₹1 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಅಲ್ಲದೆ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸ್‌ರಾಜ್ ಅವರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ₹2 ಕೋಟಿ ಮಂಜೂರು ಮಾಡಿದರು. ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಚಿವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14.50 ಕೋಟಿ ರು. ಕೊಟ್ಟಿದ್ದಾರೆ. ಅದು ಟೆಂಡರ್ ಆಗಿದ್ದು, ಕಾಮಗಾರಿ ಪ್ರಾರಂಭ ಆಗುತ್ತದೆ. ಬೆಲ್ಲವತ್ತಸಾನೆಗೆ ₹1 ಕೋಟಿ ಮಂಜೂರಾಗಿದೆ. ಒಟ್ಟು ಸಣ್ಣ ನೀರಾವರಿ ಇಲಾಖೆಯಿಂದ ₹18.50 ಕೋಟಿ ಮಂಜೂರಾಗಿದೆ ಎಂದರು.ಸದ್ಯದಲ್ಲೇ ಹಿರಿಕೆರೆಯಲ್ಲಿ 2 ಕೋಟಿ ರು. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ಮಾಡಲಾಗುವುದು. ಕುದೇರು, ಕೆಸ್ತೂರು, ಹೊಂಗನೂರು ಮೂರು ಗ್ರಾಮಗಳಿಗೂ ಕೆ.ಪಿಎಸ್ ಶಾಲೆ ಮಂಜೂರಾಗಿದೆ. ಹಂತಹಂತವಾಗಿ ಹೊಂಗನೂರು ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.ವಿರೋಧ ಪಕ್ಷದವರು ಅರಿಯಬೇಕು:
ಭಾಗ್ಯಗಳ ಭಾಗ್ಯ ಕೊಟ್ಟವರು ಸಿದ್ದರಾಮಯ್ಯನವರು ಎಂದು ಜನ ಮಾತನಾಡುತ್ತಾರೆ. ಬೇರೆ ರಾಜ್ಯದ ಸರ್ಕಾರಗಳು ಇವರ ಮಾದರಿ ಅನುಷ್ಠಾನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಭಿವೃದ್ಧಿ ಮಾಡಲು ಅನುದಾನ ಇಲ್ಲ ಸರ್ಕಾರ ದಿವಾಳಿಯಾಗಿದೆ ಎಂಬ ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಇಷ್ಟೊಂದು ಅನುದಾನ ಕೊಡಲು ಸಾಧ್ಯವಾಗುತ್ತಿದೆ ಎಂಬುವುದನ್ನು ವಿರೋಧ ಪಕ್ಷದವರು ಅರಿಯಬೇಕು ಎಂದು ಚಾಟಿ ಬೀಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ಹೊಂಗನೂರು ಗ್ರಾಮದ ಅಭಿವೃದ್ಧಿಗೆ ₹2.20 ಕೋಟಿ ಅನುದಾನ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡುವ ಸರ್ವತೋಮುಖ ಅಭಿವೃದ್ಧಿಪಡಿಸಿಕೊಡಬೇಕು ಎಂದು ಮನವಿ ಮಾಡಿದರು. ಚಂದ್ರು ಮನವಿ:
ಹೊಂಗನೂರು ಗ್ರಾಮದಲ್ಲಿರುವ ಪ್ರಾಥಮಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು, ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕ, ಗ್ರಾಮದ ಬಸ್ ನಿಲ್ದಾಣ ಅಭಿವೃದ್ಧಿ, ರೇಚಂಬಳ್ಳಿಯಿಂದ ಬೆಲ್ಲವತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪಡಿಸಬೇಕು, ಎಂದು ಗ್ರಾಮಸ್ಥರು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ರೂಪಾ ಮೋಹನ್, ಉಪಾಧ್ಯಕ್ಷ ನವೀನ್ ಕುಮಾರ್, ಸದಸ್ಯರಾದ ಮಣಿಕಂಠ, ಚಾಮದಾಸ್, ಶಂಕರ್, ನಿರ್ಮಲಾ ರಾಮು, ವಿಶಾಲಾಕ್ಷಿ, ಶಿವಣ್ಣೆಗೌಡ, ತಾಪಂ ಪ್ರಭಾರ ಇಒ ಅರಸ್, ಜಲ ಜೀವನ್ ಮೀಷನ್ ಯೋಜನೆ ಎಇಇ ಜಗದೀಶ್, ಚಾಮುಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ತಾಪಂ ಮಾಜಿ ಸದಸ್ಯ ಮಹದೇವಯ್ಯ, ಮುಖಂಡರಾದ ಮಣಿಮಾಸ್ಟರ್, ಕಂದಹಳ್ಳಿ ನಂಜುಂಡಸ್ವಾಮಿ ವೀರಣ್ಣ ಪುಟ್ಟಸ್ವಾಮಿ, ಜಯರಾಜು ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.