ಜಮ್ಮುಕಾಶ್ಮೀರದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ: ಕೊಡಗಿನ ಯೋಧ ಚಿಂತಾಜನಕ

KannadaprabhaNewsNetwork |  
Published : Dec 28, 2024, 01:01 AM IST
ದಿವಿನ್‌ | Kannada Prabha

ಸಾರಾಂಶ

ಜಮ್ಮು ಕಾಶ್ಮೀರದ ಪೂಂಚ್ ಬಳಿ ಬುಧವಾರ ಬೆಳಗ್ಗಿನ ಜಾವ ಭಾರತೀಯ ಸೇನೆಯ ವಾಹನ ಪ್ರಪಾತಕ್ಕೆ ಉರುಳಿದ ವಾಹನದಲ್ಲಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್ (28) ಸ್ಥಿತಿ ಚಿಂತಾಜನಕವಾಗಿದ್ದು, ಜಮ್ಮುವಿನ ಉದಮಪುರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಜಮ್ಮು ಕಾಶ್ಮೀರದ ಪೂಂಚ್ ಬಳಿ ಬುಧವಾರ ಬೆಳಗ್ಗಿನ ಜಾವ ಭಾರತೀಯ ಸೇನೆಯ ವಾಹನ ಪ್ರಪಾತಕ್ಕೆ ಉರುಳಿದ ವಾಹನದಲ್ಲಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್ (28) ಸ್ಥಿತಿ ಚಿಂತಾಜನಕವಾಗಿದ್ದು, ಜಮ್ಮುವಿನ ಉದಮಪುರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಬಗ್ಗೆ ದಿವಿನ್ ಪೋಷಕರಿಗೆ ಮಿಲಿಟರಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಅವರು ಗುರುವಾರ ಜಮ್ಮುವಿನ ಉದಮಪುರಕ್ಕೆ ತೆರಳಿದ್ದಾರೆ.

ಮಾಲಂಬಿ ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿಯ ಏಕೈಕ ಪುತ್ರನಾದ ದಿವಿನ್, 10 ವರ್ಷಗಳ ಹಿಂದೆ ಭಾರತೀಯ ಭೂ ಸೇನೆಗೆ ಸೇರಿದ್ದರು. ದಿವಿನ್ ಮರಾಠ ರೆಜಿಮೆಂಟ್‍ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗಿನ ಜಾವ ಸೇನೆಯ ಮರಾಠ ರೆಜಿಮೆಂಟಿಗೆ ಸೇರಿದ ವಾಹನದಲ್ಲಿ ಯೋಧ ದಿವಿನ್ ಸೇರಿದಂತೆ 10 ಮಂದಿ ಯೋಧರು ಎಂದಿನಂತೆ ಪೆಟ್ರೊಲಿಂಗ್‍ಗೆ ತೆರಳುತ್ತಿದ್ದಾಗ ವಾಹನ ಜಮ್ಮು ಕಾಶ್ಮೀರದ ಪೂಂಚ್‍ ಬಳಿ ಪ್ರಪಾತಕ್ಕೆ ಉರುಳಿತ್ತು. ಈ ದುರಂತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿದಂತೆ ಐವರು ಮೃತಪಟ್ಟಿದ್ದರು. ದಿವಿನ್ ಸೇರಿದಂತೆ 5 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಉದಮಪುರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ದಿವಿನ್ ಸ್ಥಿತಿ ಚಿಂತಾಜನಕವಾಗಿರುವ ಕುರಿತು ಮಿಲಿಟರಿ ಅಧಿಕಾರಿಗಳು ದಿವಿನ್ ಪೋಷಕರಿಗೆ ಮಾಹಿತಿ ನೀಡಿದ್ದ ಹಿನ್ನೆಲೆ ದಿವಿನ್ ತಾಯಿ ಜಯಾ ಮತ್ತು ಸಂಬಂಧಿಕರು ಉದಮಪುರಕ್ಕೆ ತೆರಳಿದ್ದಾರೆ. ದಿವಿನ್ ಆರೋಗ್ಯ ಪರಿಸ್ಥಿತಿ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ದಿವಿನ್ ತಂದೆ ಪ್ರಕಾಶ್ 2 ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡಿದ್ದರು. ದಿವಿನ್‌ಗೆ ಪಿರಿಯಪಟ್ಟಣ ಮೂಲದ ಯುವತಿಯ ಜೊತೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು. ಮುಂದಿನ ಫೆಬ್ರವರಿಯಲ್ಲಿ ವಿವಾಹದ ದಿನಾಂಕವನ್ನು ಗೊತ್ತು ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌