ಕೊಪ್ಪಳ: ಸಾಮಾಜಿಕ ಪಿಡುಗಿನ ವ್ಯವಸ್ಥೆಯಲ್ಲಿ ಸಿಕ್ಕು ನಲುಗುತ್ತಿರುವ ಜಿಲ್ಲೆಯಲ್ಲಿನ ಮಾಜಿ ದೇವದಾಸಿಯರ ಪುನರ್ವಸತಿಗೆ ಎಲ್ಲ ರೀತಿಯ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ನ್ಯಾಯಾಲಯ, ಉಪ ವಿಭಾಗಾಧಿಕಾರಿ ನ್ಯಾಯಾಲಯ ಮತ್ತು ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಬಗ್ಗೆ ಅಧ್ಯಕ್ಷರು ಕೇಳಿದರು. 2021-22ರಿಂದ 2023-24ನೇ ಸಾಲಿನ ವರೆಗೆ ದಾಖಲಾಗಿದ್ದ ಒಟ್ಟು 37 ಪಿಟಿಸಿಎಸ್ ಪ್ರಕರಣಗಳ ಪೈಕಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ 34 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. 8 ಪ್ರಕರಣಗಳು ಬಾಕಿ ಇವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಯಾರಿಂದಾದರೂ ತೊಂದೆರೆಯಾದಾಗ ಅಗತ್ಯ ಕಾನೂನುಗಳಡಿ ತಕ್ಷಣ ಪ್ರಕರಣ ದಾಖಲಿಸುತ್ತ ಗುಣಮಟ್ಟದ ತನಿಖೆ ನಡೆಸಿ ಆಪಾದಿತರ ವಿರುದ್ಧ ನಿಗದಿತ ಅವಧಿಯೊಳಗೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸುವ ಕಾರ್ಯವನ್ನು ಪೊಲೀಸ್ ಇಲಾಖೆಯಿಂದ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದರು.ಜೆಜೆಎಂ ಕಾಮಗಾರಿ ಅಚ್ಚುಕಟ್ಟಾಗಿ ನಡೆಯಲಿ: ಉತ್ತಮ ಉದ್ದೇಶದ ಜಲಜೀವನ ಮಿಷನ್ ಕಾಮಗಾರಿ ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅದರಲ್ಲು ಎಸ್‌ಸಿ ಮತ್ತು ಎಸ್‌ಟಿ ಕಾಲನಿಗಳಲ್ಲಿ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆದಿವೆ ಎನ್ನುವ ದೂರುಗಳಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಉತ್ತಮ ಅನುಷ್ಠಾನ: ಎಸ್‌ಸಿ ಮತ್ತು ಎಸ್‌ಟಿ ಜನರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಇರುವ ಗೃಹಲಕ್ಷ್ಮೀ ಯೋಜನೆಯ ಜಾರಿಗೆ ಕಾಳಜಿ ವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.ವಿಧಾನಸಭಾ ಸದಸ್ಯರು ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರಾದ ಐಹೊಳೆ ದುರ್ಯೋಧನ, ಬಸನಗೌಡ ದದ್ದಲ, ಬಸವರಾಜ್ ಮತ್ತಿಮೂಡ್, ಕರೆಮ್ಮ, ಶಾಂತರಾಮ ಬುಡ್ನ ಸಿದ್ದಿ, ಜಗದೇವ್ ಗುತ್ತೇದಾರ್ ಮತ್ತು ಕೃಷ್ಣ ನಾಯಕ, ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ. ಸೀನ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.