ಕನ್ನಡಪ್ರಭವಾರ್ತೆ ನಾಗಮಂಗಲಕೃಷಿ ಕ್ಷೇತ್ರದಲ್ಲಿ ವ್ಯಕ್ತವಾಗುವ ಆವಿಷ್ಕಾರಗಳ ಫಲ ರೈತರಿಗೆ ತಲುಪಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ದೇಶದಲ್ಲಿ ಶೇ.೭೦ರಷ್ಟು ಮಂದಿ ಜನರು ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಕೃಷಿ ಅವಲಂಬಿಸಿರುವ ಬಹುಸಂಖ್ಯೆಯ ರೈತರು ಸಧೃಡರಾದರೆ ಮಾತ್ರ ಒಂದು ಕುಟುಂಬ, ಜಿಲ್ಲೆ, ರಾಜ್ಯ ಮತ್ತು ದೇಶ ಸದೃಢವಾಗುತ್ತದೆ ಎಂದರು.
ರೈತರಿಗೆ ಭೂಮಿ ಉಳುಮೆ ಮಾಡುವ ಜೊತೆಗೆ ವ್ಯವಹಾರ ನಡೆಸುವುದಕ್ಕೂ ಗೊತ್ತು ಎಂಬುದಕ್ಕೆ ಇತ್ತೀಚೆಗೆ ಬೆಂಗಳೂರಿನಲ್ಲಿ ೩ ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮೇಳವೇ ಸಾಕ್ಷಿ. ಏಕೆಂದರೆ, ಆ ಮೇಳದಲ್ಲಿ ೧೫೦ ಕೋಟಿ ರು.ಗೂ ಮಿಗಿಲಾದ ಸಿರಿಧಾನ್ಯ ರಫ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ೫೦ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು, ೩೦೦ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಲಕ್ಷಾಂತರ ಜನತೆಯಲ್ಲಿ ಸಾವಯವ ಆಹಾರ ಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.ಹೆಣ್ಣು ಮಕ್ಕಳು ಕುಟುಂಬದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಬುದ್ದಿವಂತಿಕೆ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹೆಣ್ಣು ಮಕ್ಕಳನ್ನು ಪ್ರಬಲರಾಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಹೈನುಗಾರಿಕೆ ಹಾಗೂ ಕೃಷಿ ಕಾಯಕದಲ್ಲಿ ಮಹಿಳೆಯರ ಪಾತ್ರ ಅಧಿಕವಾಗಿದೆ ಎಂದರು.
ಹಳೆ ಮೈಸೂರು ಭಾಗದ ರೈತರು ತಮ್ಮ ಜಮೀನುಗಳನ್ನು ಇಳುವರಿ ಭರಿತ ಜಮೀನುಗಳನ್ನಾಗಿ ಪರಿವರ್ತಿಸಿ ಅಧಿಕ ಇಳುವರಿಯ ಕಬ್ಬಿನ ಫಸಲು ಬೆಳೆಯುವ ಬೆಳೆ ತಾಂತ್ರಿಕತೆಯ ವಿನಿಮಯಕ್ಕಾಗಿ ಉತ್ತಕ ಕರ್ನಾಟಕ ಭಾಗಕ್ಕೆ ಅಧ್ಯಯನ ಪ್ರವಾಸ ಆಯೋಜಿಸಲಾಗುವುದು. ಪ್ರತಿಯೊಂದು ಕೃಷಿಕರ ಕುಟುಂಬವು ಸಮಗ್ರ ಕೃಷಿಗೆ ಒತ್ತು ನೀಡಬೇಕು. ಇತರೆ ವೃತ್ತಿಯೊಂದಿಗೆ ಕೃಷಿಯನ್ನು ಪೋಷಿಸುವ ಹೊಣೆಗಾರಿಕೆ ಹೊಂದಬೇಕು ಎಂದರು.
೧೯೪೭ರ ಸುಮಾರಿಗೆ ನಮ್ಮ ದೇಶದ ಒಟ್ಟು ಆರ್ಥಿಕತೆಯಲ್ಲಿ ರೈತರ ಕೃಷಿ ಚಟುವಟಿಕೆಯಿಂದ ಬರುತ್ತಿದ್ದ ಆದಾಯ ಶೇ.೫೦ರಷ್ಟಿತ್ತು. ವಿವಿಧ ಕಾರಣಗಳಿಗೋಸ್ಕರ ಅದು ಕಡಿಮೆಯಾಗುತ್ತಾ ಬಂತು. ೧೯೬೦ ನಂತರದಲ್ಲಿ ಬಂದಂತಹ ಕೃಷಿ ವಿಜ್ಞಾನಿಗಳು ಮತ್ತು ಕೃಷಿಕರು ಮಾಡಿದ ಶ್ರಮದಿಂದ ಇಂದು ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸಾಧನೆಯಾಗುತ್ತಿದೆ ಎಂದರು.
ರಾಜ್ಯ ಕೃಷಿ ಆಯುಕ್ತಾಲಯ ಆಯಕ್ತ ವೈ.ಎಸ್.ಪಾಟೀಲ್, ಜಿಕೆವಿಕೆ ಕುಲಪತಿ ಡಾ.ಎಸ್.ಬಿ.ಸುರೇಶ್, ಕೃಷಿ ಇಲಾಖೆಯ ನಿರ್ದೇಶಕ ಜಿ.ವಿ.ಪುತ್ರ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ಎಚ್.ಪದ್ಮನಾಭ್, ವೈಭವ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕಿಯರಾದ ಡಾ.ಕೆ.ಮಾಲತಿ, ಮಮತ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಸಾವಿರಾರು ಮಂದಿ ರೈತರು, ರೈತ ಮಹಿಳೆಯರು ಇದ್ದರು.