ಕನ್ನಡಪ್ರಭ ವಾರ್ತೆ ಮಡಿಕೇರಿ
ಮರಗೋಡಿನಲ್ಲಿ ಅತ್ತೆ ಪೂವಮ್ಮ, ವೃತ್ತಿಯಲ್ಲಿ ಶಿಕ್ಷಕರಾಗಿರುವ ಪತಿ ಪ್ರಸನ್ನ, ಒಂದು ವರ್ಷದ ಪುತ್ರಿ ಜೊತೆಗೆ ಬಿಂದು ವಾಸವಾಗಿದ್ದು. ಅತ್ತೆ-ಸೊಸೆ ನಡುವೆ ಹಲವು ವರ್ಷಗಳಿಂದ ಮನಸ್ತಾಪ ಇತ್ತು. ಇಬ್ಬರ ನಡುವೆ ಕಲಹವೂ ಆಗಾಗ್ಗೆ ನಡೆಯುತ್ತಿತ್ತು ಎನ್ನಲಾಗಿದೆ.
ಏ.15ರಂದು ಪತಿ ಮೌಲ್ಯಮಾಪನ ಕರ್ತವ್ಯಕ್ಕಾಗಿ ಮಡಿಕೇರಿಗೆ ತೆರಳಿದ್ದ ಸಂದರ್ಭ ಪೂವಮ್ಮ ಕುಸಿದು ಬಿದ್ದಿರುವುದಾಗಿ ಪತಿ ಪ್ರಸನ್ನ ಅವರಿಗೆ ಬೆಳಗ್ಗೆ ಬಿಂದು ಕರೆ ಮಾಡಿ ತಿಳಿಸಿದ್ದಾಳೆ. ಅವರು ಬಂದು ನೋಡುವಷ್ಟರಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಂತರ ಮೃತ ಪೂವಮ್ಮ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಪೂವಮ್ಮ ಹೃದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಆ ಕ್ಷಣದಲ್ಲಿ ಸಾವಿನ ಕುರಿತು ಹೆಚ್ಚಿನ ಅನುಮಾನವೂ ಕುಟುಂಬಸ್ಥರಲ್ಲಿ ಮೂಡಿರಲಿಲ್ಲ.ದಿನಕಳೆದಂತೆ ಪೂವಮ್ಮ ಸಾವಿನ ಬಗ್ಗೆ ಕುಟುಂಬಸ್ಥರಿಗೆ ತೀವ್ರ ಅನುಮಾನ ಮೂಡಿದೆ. ಅದರಲ್ಲೂ ಪತಿ ಪ್ರಸನ್ನ ಅವರಿಗೆ ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲೆ ರಕ್ತದ ಕಲೆ, ಮುಖದಲ್ಲಿ ಕೆಲವೊಂದು ಪರಚಿದ ಕಲೆಗಳು ಗಮನಿಸಿ ಸಂಶಯ ಮತ್ತಷ್ಟು ಹೆಚ್ಚಾಗಿದೆ. ಇದರೊಂದಿಗೆ ಬಿಂದು ನಡವಳಿಕೆಯಲ್ಲಿನ ಬದಲಾವಣೆಯೂ ಹೆಚ್ಚಿನ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಅಂದು ನಡೆದದ್ದೇನು?:
ಕೆಲ ಹೊತ್ತಿನ ಬಳಿಕ ಸಾವಿನ ವಿಚಾರ ತಿಳಿದ ಬಿಂದು ಮನೆಯಲ್ಲಿ ಹರಿದಿದ್ದ ರಕ್ತವನ್ನು ಶುಚಿಮಾಡಿದ್ದಲ್ಲದೆ, ಹಾಸಿಗೆ ಮೇಲಿದ್ದ ಬೆಡ್‌ಶೀಟ್ ಸೇರಿದಂತೆ ಕೆಲ ಬಟ್ಟೆಯನ್ನು ಒಗೆಯಲು ಶೇಖರಿಸಿಡುವ ಬಾಸ್ಕೆಟ್‌ಗೆ ಹಾಕಿ ನೆಲಕ್ಕೆ ಹಾಸಿದ್ದ ಮ್ಯಾಟ್ ಬದಲಾಯಿಸಿ ಆಕೆ ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿಕೊಂಡು ಪ್ರಕರಣ ಮರೆಮಾಚುವ ಯತ್ನಕ್ಕೆ ಮುಂದಾಗಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.