ರಾಮಜನ್ಮಭೂಮಿ ಹೋರಾಟಗಾರ ಬಂಧನ: ಟೆಂಗಿನಕಾಯಿ ಕಿಡಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಹಳೇ ಹುಬ್ಬಳ್ಳಿ ಗಲಾಟೆ ಮಾಡಿದವರಿಗೆ ಕಾಂಗ್ರೆಸ್ಸಿಗರು ಅಮಾಯಕರು ಎಂದು ಪಟ್ಟ ಕಟ್ಟಿದ್ದರು. ಆದರೆ 31 ವರ್ಷಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡವರನ್ನು ಈಗ ಅರೆಸ್ಟ್‌ ಮಾಡುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮನೆಗೆ ಭೇಟಿ, ಕುಟುಂಬದವರ ಜತೆ ಚರ್ಚೆಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಮಜನ್ಮಭೂಮಿ ಹೋರಾಟಗಾರರನ್ನು 31 ವರ್ಷದ ಬಳಿಕ ಬಂಧಿಸುತ್ತಿರುವುದು ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣದ ಪರಮಾವಧಿಯನ್ನು ತೋರಿಸುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.

1992ರಲ್ಲಿ ನಡೆದ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ, ಎರಡು ದಿನದ ಹಿಂದೆ ಬಂಧಿತನಾಗಿರುವ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮನೆಗೆ ಭೇಟಿ ನೀಡಿ, ಪತ್ನಿ, ಪುತ್ರರೊಂದಿಗೆ ಚರ್ಚೆ ನಡೆಸಿದರು. ಭಯ ಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳೆಹುಬ್ಬಳ್ಳಿಯಲ್ಲಿ ನಡೆದ ಗಲಭೆ ಮಾಡಿದವರ ಪರವಾಗಿ ಕಾಂಗ್ರೆಸಿಗರು ಮಾತನಾಡುತ್ತಾರೆ. ಹಳೇ ಹುಬ್ಬಳ್ಳಿ ಗಲಾಟೆ ಮಾಡಿದವರ ಬಿಡುಗಡೆಗೆ ಪತ್ರ ಬರೆದಿದ್ದರು. ಅವರಿಗೆ ಅಮಾಯಕರು ಎಂದು ಪಟ್ಟ ಕಟ್ಟಿದ್ದರು. ಆದರೆ 31 ವರ್ಷಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡವರನ್ನು ಈಗ ಅರೆಸ್ಟ್‌ ಮಾಡುತ್ತಾರೆ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಇದಕ್ಕೆ ಇಡೀ ಹಿಂದೂ ಸಮಾಜ ಸಂತೋಷಗೊಂಡಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆ. 31 ವರ್ಷಗಳ ಹಿಂದಿನ ಕೇಸ್‌ನ್ನು ಈಗ ಒಪನ್‌ ಮಾಡಿದೆ. ರಾಮನ ಮೂರ್ತಿ ಪ್ರತಿಷ್ಠಾಪನೆಗೆ ನಿಮ್ಮ ಸಹಮತಿ ಇಲ್ವಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಅಲ್ಪಸಂಖ್ಯಾತರ ತುಷ್ಟೀಕರಣ ಪರಮೋಚ್ಚ ಹಂತಕ್ಕೆ ತಲುಪಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸಿಗರಿಗೆ ಹುಬ್ಬಳ್ಳಿ ಎಂದರೆ ಬಹಳ ಪ್ರೀತಿ. ಒಂದು ಕಡೆ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು. ಇದೀಗ ಹಿಂದೂ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಹಿಂದೂ ಕಾರ್ಯಕರ್ತನ ಬಂಧಿಸುವುದಕ್ಕೆ ಯಾರೂ ಸೊಪ್ಪು ಹಾಕಿಲ್ಲ. ಅನೇಕ ಕಾರ್ಯಕರ್ತರು ಹೋರಾಟದ ಮೂಲಕವೇ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅಕಸ್ಮಾತ್ ಏನಾದರೂ ಘಟನೆಯಾದರೆ ಅದಕ್ಕೆ ಕಾಂಗ್ರೆಸ್‌ ಸರ್ಕಾರವೇ ನೇರ ಹೊಣೆಯಾಗುತ್ತದೆ. ಕಾಂಗ್ರೆಸ್ ಒತ್ತಡ ತಂದು ಕಾರ್ಯಕರ್ತನ ಅರೆಸ್ಟ್ ಮಾಡಿಸಿದೆ. ಹಿಂದೆ ಅನೇಕ ಕಮೀಷನರ್ ಇದ್ದರು. ಆಗ ಯಾಕೆ ಅರೆಸ್ಟ್‌ ಮಾಡಲಿಲ್ಲ. ಒಂದು ಕಡೆ ಗಲಭೆಕೋರರ ಪರ ಮಾತಾಡುತ್ತಾರೆ. ಮತ್ತೊಂದು ಕಡೆ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಾರೆ. ಕಾಂಗ್ರೆಸ್‌ ಅಂದರೆ ಹಿಂದೂ ವಿರೋಧಿ ಪಾರ್ಟಿ ಎಂದು ಟೀಕಿಸಿದ ಅವರು, ಪೊಲೀಸ್‌ ಇಲಾಖೆಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಶ್ರೀಕಾಂತ ಪೂಜಾರಿ ಪತ್ನಿ ಅಂಬಿಕಾ ಪೂಜಾರಿ, ಪುತ್ರ ಮಂಜುನಾಥ ಪೂಜಾರಿ ಸೇರಿದಂತೆ ಹಲವರಿದ್ದರು.

Share this article