- ಯುಟ್ಯೂಬರ್ ಸಮೀರ್‌ಗೆ ರಕ್ಷಣೆ, ಸಂತೋಷ ರಾವ್ ಕುಟುಂಬಕ್ಕೆ ಪರಿಹಾರ ನೀಡಿ: ಡಾ.ಓಬಳೇಶ್
ಧರ್ಮಸ್ಥಳದ ಸೌಜನ್ಯ ಮೇಲೆ ಅತ್ಯಾಚಾರ ಎಸಗಿ, ಅಮಾನುಷವಾಗಿ ಹತ್ಯೆಗೈದ ಹಂತಕರನ್ನು ಬಂಧಿಸುವಂತೆ ಹಾಗೂ ಯುಟ್ಯೂಬರ್ ಸಮೀರ್‌ಗೆ ರಕ್ಷಣೆ ನೀಡಿ, ಸಂತೋಷ ರಾವ್ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ವಿವಿಧ ಪ್ರಗತಿಪರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಡಾ. ಕೆ.ಎ. ಓಬಳೇಶ ಅವರು, ವಿದ್ಯಾರ್ಥಿನಿ ಸೌಜನ್ಯ ಮೇಲೆ ಅತ್ಯಾಚಾರ ಎಸಗಿದವರನ್ನು ತಕ್ಷಣೇ ಬಂಧಿಸಬೇಕು. ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿನಿ ಸೌಜನ್ಯ ಸಾವಿನ ಪ್ರಕರಣದ ಮರುತನಿಖೆಯೊಂದಿಗೆ 2-3 ದಶಕಗಳಿಂದ ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಅಸಹಜ ಸಾವು, ಕೊಲೆ, ಅತ್ಯಾಚಾರ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ನಿರ್ಲಕ್ಷ್ಯ, ಸೌಜನ್ಯ ಸಾವಿಗೆ ಕಾರಣರಾದ ಪಾಪಿಗಳು, ಅಂತಹವರಿಗೆ ಬೆಂಬಲಿಸುತ್ತಿರುವ ಪ್ರತಿಷ್ಟಿತರ ಮುಖವಾಡಗಳನ್ನು ಕಳಚುವ ಕೆಲಸವನ್ನು ದಾವಣಗೆರೆಯಿಂದಲೇ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ ಜನಾಂದೋಲನ ರೂಪಿಸಲಾಗುವುದು ಎಂದು ಹೇಳಿದರು.
ದಾವಣಗೆರೆಯ ಎಲ್ಲ ಪ್ರಗತಿಪರ ಸಂಘಟನೆಗಳು, ಹೋರಾಟಗಾರರು ಯು ಟ್ಯೂಬರ್ ಸಮೀರ್ ಜೊತೆಗಿದ್ದು, ಆತನಿಗೆ ಯಾವುದೇ ರೀತಿಯ ಹಲ್ಲೆ, ತೊಂದರೆ, ಬೆದರಿಕೆಯ ಮಾತುಗಳು ಕೇಳಿಬರದಂತೆ ಸರ್ಕಾರ ಸೂಕ್ತ ರಕ್ಷಣೆ, ಭದ್ರತೆಯನ್ನು ಸಮೀರ್ ಹಾಗೂ ಆತನ ಕುಟುಂಬಕ್ಕೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಉದಾಸೀನ ಮಾಡಬಾರದು. ಯುಟ್ಯೂಬರ್ ಸಮೀರ್ ಕೈಗೊಂಡ ತನಿಖೆ ವಸ್ತುನಿಷ್ಠವಾಗಿದ್ದು, ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದರು.
- - -
- - - -11ಕೆಡಿವಿಜಿ2.ಜೆಪಿಜಿ: