ರಾಮಮೂರ್ತಿ ನವಲಿ ಗಂಗಾವತಿ
ಅಂಜನಾದ್ರಿಯ ಪ್ರವೇಶ ದ್ವಾರ ಮತ್ತು ಬೆಟ್ಟದ ಹಿಂಬಾಗದಲ್ಲಿರುವ ವೇದಪಾಠ ಶಾಲೆಯ ಆವರಣದಲ್ಲಿ ಊಟದ ವ್ಯವಸ್ಥೆ ಮತ್ತು ದೇವರ ಪ್ರಸಾದ ವಿತರಣೆಗೆ ಕೌಂಟರ್ ತೆರೆಯಲಾಗಿದ್ದು, ಕುಡಿಯುವ ನೀರು, ಆರೋಗ್ಯ ಸೇವೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.
ಅಂಜನಾದ್ರಿ ಬೆಟ್ಟದ ಹಿಂಭಾಗದಲ್ಲಿರುವ ವೇದ ಪಾಠ ಶಾಲೆಯ ಆವರಣದಲ್ಲಿ ಬರುತ್ತಿದ್ದ ಭಕ್ತರಿಗೆ ಪ್ರಸಾದ ವಿತರಿಸಿ ಸಚಿವ ಶಿವರಾಜ ತಂಗಡಗಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಚಾಲನೆ ನೀಡಿದರು. ವಿವಿಧ ಇಲಾಖೆಯ ಸಿಬ್ಬಂದಿಗಳು, ಸ್ವಯಂ ಸೇವಕರು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಪ್ರಸಾದ ವಿತರಿಸಿದರು.ಪ್ರಸಾದ ಖರೀದಿ: ಅಂಜನಾದ್ರಿಗೆ ಬಂದ ಹನುಮಮಾಲಾಧಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ದೇಗುಲ ಸಮಿತಿಯಿಂದ ನೀಡುವ ಪ್ರಸಾದ ಕಿಟ್ ನ್ನು ಸಚಿವ ಶಿವರಾಜ ತಂಗಡಗಿ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹಣ ಪಾವತಿಸಿ ಖರೀದಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಹ ಪ್ರಸಾದ ಕಿಟ್ ಖರೀದಿಸಿದರು.
ಪಾದಯಾತ್ರೆ ಮೂಲಕ ಭಕ್ತರ ಆಗಮನ: ತಮ್ಮ ಇಷ್ಟಾರ್ಥ ಈಡೇರಿಸುವುದಕ್ಕಾಗಿ ಸೇವೆ ಮಾಡುತ್ತಿದ್ದ ಹನುಮ ಮಾಲಾಧಾರಿಗಳು ಮತ್ತು ಭಕ್ತರು ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಆಗಮಿಸುತ್ತಿದ್ದಾರೆ. ಸಿಂಧನೂರು, ಬಳ್ಳಾರಿ, ಕೊಪ್ಪಳ, ರಾಯಚೂರು, ಹೊಸಪೇಟೆಯಿಂದ ಮಕ್ಕಳು ಸೇರಿದಂತೆ ಯುವಕರು ಪಾದಯಾತ್ರೆ ಮೂಲಕ ಆಗಮಿಸಿದರು.ಅಂಜನಾದ್ರಿ ಈಗ ಭಕ್ತರ ಪುಣ್ಯ ಕ್ಷೇತ್ರವಾಗಿದ್ದು, ಭಕ್ತ ಸಾಗರವೇ ಹರಿದು ಬರುತ್ತಿರುವದು ವಿಶೇಷವಾಗಿದೆ.
ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಗೆ ಭಕ್ತ ಸಮೂಹ ಆಗಮಿಸುತ್ತಿದ್ದು, ಬರುವ ಭಕ್ತರಿಗೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.