ಜನರ ಅನುಕೂಲಕ್ಕಾಗಿ ಜನರದ್ದೇ ತೆರಿಗೆ ಹಣದಿಂದ ಹಳೆಯ ತಹಸೀಲ್ದಾರ ಕಚೇರಿಯನ್ನು ದುರಸ್ತಿ ಮಾಡಿಸಿ ಸ್ಥಳಾಂತರಿಸಿದ್ದೇವೆ. ಇದೆಲ್ಲಕ್ಕೂ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದೇ ಮಾಡಿದ್ದೇವೆ.
ಕನ್ನಡಪ್ರಭ ವಾರ್ತೆ ಕುಮಟಾಜನರ ಅನುಕೂಲಕ್ಕಾಗಿ ಜನರದ್ದೇ ತೆರಿಗೆ ಹಣದಿಂದ ಹಳೆಯ ತಹಸೀಲ್ದಾರ ಕಚೇರಿಯನ್ನು ದುರಸ್ತಿ ಮಾಡಿಸಿ ಸ್ಥಳಾಂತರಿಸಿದ್ದೇವೆ. ಇದೆಲ್ಲಕ್ಕೂ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದೇ ಮಾಡಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಇಲ್ಲಿನ ಹಳೆಯ ತಹಸೀಲ್ದಾರ ಕಚೇರಿಗೆ ಸೋಮವಾರ ಪುರಸಭೆಯ ಕಾರ್ಯಾಲಯ ಸ್ಥಳಾಂತರಗೊಂಡ ಹಿನ್ನೆಲೆ ಪುರಸಭೆ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡೂವರೆ ವರ್ಷದಲ್ಲಿ ಕುಮಟಾ ಪುರಸಭೆಗೆ ಎಸ್‌ಎಫ್‌ಸಿ ಸಹಿತ ವಿಶೇಷ ಅನುದಾನ ಯಾವುದೂ ಬಂದಿಲ್ಲ. ಶಾಸಕರ ನಿಧಿಯಿಂದ ಇಲ್ಲಿನ ರಸ್ತೆ ದುರಸ್ತಿ ಮಾಡಿದ್ದೇವೆ. ಅಭಿವೃದ್ಧಿಯೊಂದೇ ನನ್ನ ಮಂತ್ರ. ಉಪವಿಭಾಗಾಧಿಕಾರಿ ಕಚೇರಿ ಮಿನಿವಿಧಾನಸೌಧಕ್ಕೆ ಸ್ಥಳಾಂತರಗೊಂಡಾಗ ಹಳೆಯ ಉಪವಿಭಾಗಾಧಿಕಾರಿ ಕಚೇರಿ ಹುಚ್ಚರ ಸಂತೆಯಂತಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್ ಸರ್ಕಾರದಡಿ ಬಾಡಿಗೆ ಕೊಡಲಾಗದ ಸ್ಥಿತಿಯಲ್ಲಿದ್ದ ಸಿಡಿಪಿಒ ಕಚೇರಿಯನ್ನು ಉಪವಿಭಾಗಾಧಿಕಾರಿ ಹಳೆಯ ಕಚೇರಿಗೆ ಸ್ಥಳಾಂತರಿಸಿದ್ದೇನೆ. ಹೀಗೆ ಕಟ್ಟಡಗಳ ಸದ್ಬಳಕೆಯಾಗಿದೆ. ಹಳೆಯ ತಹಸೀಲ್ದಾರ ಕಚೇರಿಯೂ ಅಷ್ಟೇ, ಎಮ್ಮೆದನಗಳ ದೊಡ್ಡಿಯಾಗಿ, ಅತ್ಯಾಚಾರ, ಅನಾಚಾರಗಳು ನಡೆದು ಸಂಪೂರ್ಣ ಹಾಳಾಗುತ್ತಿತ್ತು. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಪುರಸಭೆ ಕಚೇರಿಯನ್ನು ಜನರ ಅನುಕೂಲಕ್ಕಾಗಿ ಹಳೆಯ ತಹಸೀಲ್ದಾರ ಕಚೇರಿಗೆ ಸ್ಥಳಾಂತರಿಸಿದ್ದೇವೆ. ಈಗ ರಥಬೀದಿಯಲ್ಲೂ ಸಮಸ್ಯೆಯಿಲ್ಲ. ಇಂಥ ಅಭಿವೃದ್ಧಿ ಕಾರ್ಯಗಳ ಕಲ್ಪನೆ ಇರಬೇಕಾಗುತ್ತದೆ. ಜನರಿಗೆ ಉಪಕಾರ ಆಗಬೇಕು. ಸರ್ಕಾರದ ಆಸ್ತಿ ಉಳಿಯಬೇಕು. ಸರ್ಕಾರದ ಆಸ್ತಿ ಉಳಿಸಲು ಏನಾದರೂ ಮಾಡಿದ್ದರೆ ಕಾಂಗ್ರೆಸ್‌ನವರು ಹೇಳಬೇಕು ಎಂದರು.ಆದರೆ ಏಕಾಏಕಿ ಕಾಂಗ್ರೆಸಿನವರು ಇಲ್ಲಿ ಬಂದು ಪ್ರೆಸ್ ಮೀಟ್ ಮಾಡಿದರು. ನಿನ್ನೆ ವಾಟ್ಸ್‌ಆ್ಯಪ್ ಮೆಸೇಜ್ ಹಾಕಿ ಪುರಸಭೆ ಸ್ಥಳಾಂತರಕ್ಕೆ ಉಸ್ತುವಾರಿ ಸಚಿವರು, ಎಐಸಿಸಿ ಸದಸ್ಯರು ಕಾರಣವೆಂದು ವಿನಾಕಾರಣ ಪ್ರಚಾರ ಮಾಡಿದ್ದಾರೆ. ಇದು ಬೇಸರ ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಂದ ಮಾತ್ರಕ್ಕೆ ಪುರಸಭೆ ಸ್ಥಳಾಂತರಕ್ಕೆ ಸರ್ಕಾರದ ಒಂದು ರೂಪಾಯಿಯಾದರೂ ಕೊಡುಗೆ ಇದೆಯೇ? ಅಥವಾ ಕಾಂಗ್ರೆಸಿನವರು ಸ್ಥಳಾಂತರ ಮಾಡಲು ಹೇಳಿದ್ದಾರಾ? ಕಾಂಗ್ರೆಸಿನವರು ನನ್ನೊಂದಿಗೆ ಬಂದು ಕೂತು ಮಾತಾಡಬಹುದಿತ್ತು. ಯಾರಿಗೂ ಹೇಳಿಲ್ಲ. ಹಿಂದೆಯೇ ಪುರಸಭೆ ಸದಸ್ಯರು ತಮ್ಮ ಸಮಸ್ಯೆ ಹೇಳಿಕೊಂಡು ಠರಾವು ಮಾಡಿದ್ದರಿಂದ ಪುರಸಭೆ ಕಾರ್ಯಾಲಯ ಇಂದು ಇಲ್ಲಿಗೆ ಬಂದಿದೆ. ಇದರಿಂದ ಯಾರಿಗಾದರೂ ಸಮಸ್ಯೆ ಇದೆಯೇ? ಏನೂ ಇಲ್ಲದೇ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಅಧಿಕಾರವಿದೆ ಎಂದು ಅಧಿಕಾರಿಗಳನ್ನು ಸಿಕ್ಕಿಸಿ ಹಾಕುವುದು, ತೊಂದರೆ ಕೊಟ್ಟು ವರ್ಗ ಮಾಡುವುದು ಇಂಥವನ್ನು ಮಾಡಬೇಡಿ ಎಂದು ಶಾಸಕರು ಸ್ಥಳೀಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದಕ್ಕೂ ಮೊದಲು ಶಾಸಕ ದಿನಕರ ಶೆಟ್ಟಿ ಪುರಸಭೆಯ ಕಾರ್ಯಾಲಯದ ಒಳಬರುವಾಗ ಎದುರಲ್ಲೇ ಬ್ಲಾಕ್ ಕಾಂಗ್ರೆಸ್ ಘಟಕ ಹಾಗೂ ಗ್ಯಾರಂಟಿ ಸಮಿತಿಯವರು ಮಾಧ್ಯಮದವರೆದುರು ಹೇಳಿಕೆ ನೀಡುತ್ತಿದ್ದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.