ಶಿಗ್ಗಾಂವಿ: ನಗರದಲ್ಲಿರುವ ಜಿ+೧ ಮನೆಗಳನ್ನು ವಿತರಿಸಿ ಆರು ತಿಂಗಳಾದರೂ ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದೇ ಕಾಲ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ನಗರ ಸಮಿತಿ ಹಾಗೂ ಜಿ+೧ ಮನೆ ಫಲಾನುಭವಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಫಲಾನುಭವಿಗಳು ನಗರದ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಮೊದಲು ಹಂಚಿಕೆಯಾಗಿದ್ದ ಜಿ+ ೨೪ ಮನೆಗಳಿಗೆ ಒಂದು ನಲ್ಲಿಯನ್ನು ಮಾತ್ರ ಕೊಡಲಾಗಿತ್ತು. ಕಳೆದ ಜೂನ್ ೨೦೨೫ರಲ್ಲಿ ಹಂಚಿಕೆ ಮಾಡಿದ ೧೫೬ ಜಿ+೧ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಇನ್ನೂ ಕಲ್ಪಿಸಿಲ್ಲ. ಕನಿಷ್ಠ ಕುಡಿಯುವ ನೀರಿಗಾಗಿ ಅಗತ್ಯವಿರುವ ನಲ್ಲಿ ಅಳವಡಿಸದಿರುವುದರಿಂದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸಮಸ್ಯೆ ಹೋಗಲಾಡಿಸಲು ಪ್ರತಿ ಮನೆಗೆ ನಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.ಈಗಾಗಲೇ ಜಿ+ ೧ ಮನೆಗಾಗಿ ಅರ್ಜಿ ಹಾಕಿ ಪುರಸಭೆಗೆ ಫಲಾನುಭವಿ ವಂತಿಗೆ ಹಣ ತುಂಬಿರುವ ನಿವೇಶನ/ಮನೆ ರಹಿತ ಹಲವಾರು ಜನ ಫಲಾನುಭವಿಗಳಿಗೆ ಮನೆ ದೊರೆತಿಲ್ಲ. ಪುರಸಭೆಗೆ ಫಲಾನುಭವಿ ವಂತಿಗೆ ಕಟ್ಟಿ ಅರ್ಜಿ ಹಾಕಿರುವ ಬಡ ಜನರಿಗೆ (ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಿ) ವಸತಿ ಸೌಲಭ್ಯ ಕಲ್ಪಿಸಬೇಕು. ಹಾಗೂ ಮಾರುತಿ ನಗರ, ಬಸವನಗರ, ಸಾಲಗೇರಿ ಓಣಿ ದ್ಯಾಮವ್ವನ ಪಾದಗಟ್ಟಿ ಸೇರಿದಂತೆ ಪುರಸಭೆಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ರಹಿತ ಬಡಜನರಿಗೆ ಹಿತ್ತಲು ಸಹಿತ ಮನೆ/ನಿವೇಶನ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿರುವ ಖಾಲಿ ಜಾಗೆಯನ್ನು ಬಳಸಿಕೊಳ್ಳಬೇಕು ಹಾಗೂ ಅಗತ್ಯಬಿದ್ದರೆ ಭೂಮಿ ಖರೀದಿ ಮಾಡಿಯಾದರೂ ಎಲ್ಲ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿ+೧ ಮನೆ ಫಲಾನುಭವಿಗಳ ಹೋರಾಟ ಸಮಿತಿ ಮುಖಂಡ ವೀರಣ್ಣ ಗಡ್ಡಿಯವರ ಮಾತನಾಡಿ, ಕೆಲವು ಜಿ+ ಮನೆಗಳಲ್ಲಿ ಗೋಡೆಗಳಲ್ಲಿ ಡ್ರೈನೇಜ್ ಹಾಗೂ ಸ್ನಾನದ ಕೊಠಡಿ ನೀರು ಸೋರಿಕೆಯಾಗುತ್ತಿದೆ. ಇನ್ನೂ ಕೆಲ ಮನೆಗಳಲ್ಲಿ ದುರಸ್ತಿ ಕೆಲಸ ಬಾಕಿ ಉಳಿದಿದೆ. ಆದ್ದರಿಂದ ಈ ಎಲ್ಲ ಬಾಕಿ ಕೆಲಸಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಜಿ+ ಮನೆ ಸ್ಟೇರಕೇಸ್ ಮೇಲೆ ಸುರಕ್ಷತೆಗಾಗಿ ಜಾಲರಿ ಹಾಕಿಸಬೇಕು. ಜಿ+ ಮನೆ ಆವರಣದಲ್ಲಿ ದೇವಸ್ಥಾನದ ಹತ್ತಿರ ಗುಂಡಿಬಿದ್ದಿದೆ, ಅದನ್ನು ಮಣ್ಣು ಹಾಕಿಸಿ ಸಮತಟ್ಟುಗೊಳಿಸಬೇಕು ಹಾಗೂ ರಸ್ತೆ ನಿರ್ಮಿಸಬೇಕು. ಶುಚಿತ್ವಕ್ಕಾಗಿ ನಿರಂತರವಾಗಿ ಕಾಲುವೆ (ಗಟಾರು) ಸ್ವಚ್ಛಗೊಳಿಸಬೇಕು. ಪ್ರತಿ ದಿನ ಕಸ ತುಂಬಿಸಿಕೊಳ್ಳುವ ವಾಹನ ಬರುವಂತೆ ಮಾಡಬೇಕು. ಸೊಳ್ಳೆ ಹೆಚ್ಚಾಗದಂತೆ ಪಾಗಿಂಗ್ ಮಾಡಬೇಕು ಹಾಗೂ ಮನೆ ಆವರಣದಲ್ಲಿ ಸಮುದಾಯಭವನ ಹಾಗೂ ಅಂಗನವಾಡಿ ಮಂಜೂರು ಮಾಡಬೇಕು ಎಂದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪುರಸಭೆಯ ಮುಖ್ಯಾಧಿಕಾರಿ ಕೆ. ಮಲ್ಲೇಶ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ರಮೇಶಗೌಡ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಮ್ಮಿಂದ ತಪ್ಪಾಗಿದೆ. ಇವತ್ತಿನಿಂದಲೇ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸವನ್ನು ಆರಂಭಿಸುತ್ತೇವೆ, ದಯವಿಟ್ಟು ಪ್ರತಿಭಟನೆ ಹಿಂಪಡೆದುಕೊಂಡು ಇದೊಂದು ಬಾರಿ ಅವಕಾಶ ಮಾಡಿಕೊಡಿ; ಒಂದು ತಿಂಗಳೊಳಗಾಗಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯ್ತು. ಪ್ರತಿಭಟನೆಯ ನಂತರದಲ್ಲಿ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜಿ+ ಮನೆ ಆವರಣಕ್ಕೆ ಭೇಟಿ ನೀಡಿದರು. ಪ್ರತಿಭಟನೆಯಲ್ಲಿ ಡಿವೈಎಫ್‌ಐ ನಗರ ಸಮಿತಿ ಅಧ್ಯಕ್ಷ ಮೌಲಾಲಿ ನವಲಗುಂದ, ಕಾರ್ಯದರ್ಶಿ ಕಿಶೋರ್ ದೋತ್ರರೆ, ಮಕಬುಲ್ ಯಲ್ಲಾಪೂರ, ಗುರುನಗೌಡ ದುಂಡಿಗೌಡ್ರ, ಕಸ್ತೂರಿ ಜಿ. ವಡ್ಡರ, ಮಂಜುಳಾ ತಡಸ, ಸುಮಿತ್ರಾ ಶಿರಹಟ್ಟಿ, ರಾಧಾ ಆಲೂರು, ಅಸ್ಮಾ ದೇವಸೂರು, ಸಾವಿತ್ರಿ ಚೌಹಾಣ, ಬಸೀರಾಬಾನು ಖುರ್ಷಾಪುರ, ಮಾಲಾನಬಿ ಬಡಿಗೇರ, ಕೃಷ್ಣ್ಣಪ್ಪ ಗದಗ, ಗಣೇಶ ತೋಟಿಗೆರ, ರುದ್ರೇಶ ಗೌರಣ್ಣನವರ, ಶಂಭು ಗಾಟೆನವರ, ಅಮಿತ್ ಬಿಂಡಲಗಿ, ಕಾಶಮ್ಮ ತಿಟ್ಟೇನವರ, ಜಯಮ್ಮ ಅಂಗಡಿ ಫಲಾನುಭವಿಗಳು ಇದ್ದರು.