ಉರ್ದು ಅಕಾಡೆಮಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನ ಅತ್ಯಂತ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವರ್ಷಕ್ಕೆ ಕೇವಲ 2 ಕೋಟಿ ರು. ಅನುದಾನ ಮಾತ್ರ ಲಭಿಸುತ್ತಿದ್ದು, ಇದರಿಂದ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ದಾನಿಗಳ ನೆರವಿನಿಂದ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ವಿಷಯಕ್ಕೆ ಗಮನಹರಿಸಿ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡಿದರೆ ತಾಲೂಕು ಮಟ್ಟದಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಉರ್ದು ಭಾಷೆ ಕೇವಲ ಮುಸ್ಲಿಂ ಸಮುದಾಯದ ಭಾಷೆಯಲ್ಲ, ಅದು ಜನಸಾಮಾನ್ಯರ ಹೃದಯದ ಭಾಷೆಯಾಗಿದೆ ಎಂದು ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮೊಹಮ್ಮದ್ ಆಲಿ ಖಾಜಿ ಹೇಳಿದರು.ನಗರದ ತಾಜ್ ಕನ್ವೆನ್ಷನ್ ಭವನದಲ್ಲಿ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಉರ್ದು ಕವಿ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಉರ್ದು ಅಕಾಡೆಮಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನ ಅತ್ಯಂತ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವರ್ಷಕ್ಕೆ ಕೇವಲ 2 ಕೋಟಿ ರು. ಅನುದಾನ ಮಾತ್ರ ಲಭಿಸುತ್ತಿದ್ದು, ಇದರಿಂದ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ದಾನಿಗಳ ನೆರವಿನಿಂದ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ವಿಷಯಕ್ಕೆ ಗಮನಹರಿಸಿ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡಿದರೆ ತಾಲೂಕು ಮಟ್ಟದಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಜನಮಿತ್ರ ಪತ್ರಿಕೆಯ ಸಂಪಾದಕ ಮದನ್ ಗೌಡ, ಭಾಷೆ ಮತ್ತು ಕಾವ್ಯಕ್ಕೆ ಯಾವುದೇ ಗಡಿ ಇಲ್ಲ, ಸಾಹಿತ್ಯ ಎಲ್ಲರಿಗೂ ಸೇರಿದ ಸಂಪತ್ತು ಎಂದರು. ಮುಶಾಯೆರಾಗಳಲ್ಲಿ ಕಾವ್ಯ ವಾಚನದ ಮೂಲಕ ಸಮಾಜದ ನೈಜ ಸತ್ಯಗಳು ಹೊರಬರುತ್ತವೆ. ಇಂತಹ ಕಾರ್ಯಕ್ರಮಗಳು ಭಾಷೆಯ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿವೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಉರ್ದು ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಇದರ ಪರಿಣಾಮವಾಗಿ ಹಲವಾರು ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಪೋಷಕರು ಉರ್ದು ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಮುಂದಾಗಬೇಕು. ತಾಲೂಕು ಮಟ್ಟದಲ್ಲಿ ಉರ್ದು ಕವಿ ಗೋಷ್ಠಿಗಳು ನಡೆದಾಗ ಮಾತ್ರ ಭಾಷೆ ಜೀವಂತವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಡೈಲಿ ಸಾಲರ್ ಪತ್ರಿಕೆಯ ಜಿಲ್ಲಾ ವರದಿಗಾರ ಹಾಗೂ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಜಮೀಲ್ ಅಹಮ್ಮದ್ ಮತ್ತು ಸರ್ಕಾರಿ ಶಾಲಾ ಶಿಕ್ಷಕಿ ಮುಬೀನಾ ಕೌಸರ್ ಅವರನ್ನು ಉರ್ದು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯ, ಹೊರರಾಜ್ಯ ಹಾಗೂ ಜಿಲ್ಲೆಯ ಹಲವಾರು ಕವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಖಿಲ ಭಾರತ ಮುಶಾಯೆರಾ ರಾತ್ರಿ 10 ಗಂಟೆಗೆ ಆರಂಭವಾಗಿ ನಸುಕಿನ ಜಾವ 3 ಗಂಟೆಯವರೆಗೆ ನಡೆಯಿತು. ಚಳಿಯನ್ನೂ ಲೆಕ್ಕಿಸದೆ ಸಾಹಿತ್ಯಾಭಿಮಾನಿಗಳು ಶಾಯೆರಿಗಳ ಕಾವ್ಯ ಲೋಕದಲ್ಲಿ ತೇಲಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಉರ್ದು ಅಕಾಡೆಮಿಯ ಜಿಲ್ಲಾ ಮುಖಂಡರಾದ ಅನ್ವರ್ ಖಾನ್ ಅನ್ವರ್, ಡಾ. ಅಖ್ತರ್ ಸಯ್ಯಿದಾ ಖಾನಮ್, ಸಯ್ಯಿದ್ ಸಜ್ಜದ್ ಪಾಷಾ, ಅತಿಕ್ ಉರ್ ರೆಹಮಾನ್, ಕಾರ್ಯದರ್ಶಿ ನಿಜಾಮುದ್ದೀನ್ ಶಾದಾಬ್, ಸಯ್ಯಿದ್ ತಾಜ್, ಜಲೀಲ್ ಅಹ್ಮದ್, ಮೊಹಮ್ಮದ್ ಇಸಾಖ್, ಇಬ್ರಾಹಿಂ, ಆಜಾಂ ಖಾನ್, ಅಬ್ದುಲ್ ಮಾಜಿದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮುಶಾಯೆರಾದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಖ್ಯಾತ ಕವಿಗಳಾದ ಮುನೀರ್ ಅಹ್ಮದ್ ಜಾಯ್ (ಬೆಂಗಳೂರು), ಡಾ. ಫರ್ಜಾನಾ ಫರಾಹ್ (ಭಟ್ಕಳ), ಇಬ್ರಾಹಿಂ ಸಾಗರ್, ಇರ್ಷಾದ್ ಅಂಜುಮ್ (ಮಹಾರಾಷ್ಟç), ರೇಷ್ಮಾ ತಲತ್ ಶಬ್ನಮ್ (ಕೋಲಾರ), ನುಸ್ರತ್ ರಹೀಮ್ (ಚಿಕ್ಕಮಗಳೂರು), ಸಯ್ಯಿದ್ ಕಬೀರ್ ಅಹ್ಮದ್ ಕಬೀರ್ (ಹಾಸನ), ತಾಲಿಬ್ ಶೋಲಾಪುರಿ, ರಫೀಕ್ ಸರ್ವರ್, ಜಹೀರ್ ಕಾನ್‌ಪುರಿ, ರಹಮತುಲ್ಲಾ ರಹಮತ್, ಅಲ್ತಾಫ್ ಝಿಯಾ, ಆಲಂ ನಿಜಾಮಿಜಮೀಯತಿ, ಸಾಕಿಬ್ ಜುನೈದಿ, ಅಹ್ಮದ್ ಬಾಷಾ ಸಾಗರ್ ಹಾಗೂ ಲುತ್ಫುಲ್ಲಾ ಮಸ್ರೂರ್ ದಾವಿ ಅವರ ಕಾವ್ಯ ವಾಚನ ವಿಶೇಷ ಗಮನ ಸೆಳೆದಿತು.